ಚಿಕ್ಕಬಳ್ಳಾಪುರ: ದ್ವಿಚಕ್ರ ವಾಹನದ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ (Accident) ಚಿಂತಾಮಣಿ ನಗರದ ಆದರ್ಶ ಟಾಕೀಸ್ ಮುಂಭಾಗದಲ್ಲಿ ನಡೆದಿದೆ.
ಕೊಮ್ಮಸಂದ್ರ ಗ್ರಾಮದ ವೆಂಕಟೇಶ್ ಹಾಗೂ ಆತನ ಪತ್ನಿ ಸರಸ್ವತಮ್ಮ ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಬುಧವಾರ ಮಧ್ಯಾಹ್ನ 12-30ರ ಸಮಯದಲ್ಲಿ ಬುರುಡಗುಂಟೆ ಸಮೀಪದ ಕೊಮ್ಮಸಂದ್ರ ಗ್ರಾಮದ ವೆಂಕಟೇಶ್ ಹಾಗೂ ಆತನ ಪತ್ನಿ ಸರಸ್ವತಮ್ಮ ತಾಲೂಕಿನ ನಾರಾಯಣಪಲ್ಲಿಯಲ್ಲಿ ಸಂಬಂಧಿಕರೊಬ್ಬರ ಇರುಮುಡಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಚಿಂತಾಮಣಿಗೆ ಬರುತ್ತಿದ್ದ ವೇಳೆ, ನಗರದ ಆದರ್ಶ ಟಾಕೀಸ್ ಮುಂಭಾಗದ ಶ್ರೀರಾಮ್ ಬೈಕ್ಸ್ ಬಳಿ ಆಯ ತಪ್ಪಿ ರಸ್ತೆಗೆ ಬಿದ್ದ ಬೈಕ್‌ನ ಮೇಲೆ ಹಿಂದಿನಿಂದ ಬಂದ ಸರ್ಕಾರಿ ಬಸ್ ಹರಿದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.
ನಗರದಲ್ಲಿ ಅಂಗಡಿಗಳ ಮಾಲೀಕರು ರಸ್ತೆಯ ಪುಟ್ ಪಾತ್ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ಪಾದಚಾರಿಗಳು ಮುಖ್ಯ ರಸ್ತೆಯಲ್ಲೇ ಹೋಗಬೇಕಾಗಿರುವುದರಿಂದ ಈ ರೀತಿಯ ಅವಘಡಗಳು ನಡೆಯುತ್ತವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಮುರಳೀಧರ್, ನಗರ ಠಾಣೆಯ ಇನ್‌ಸ್ಪೆಕ್ಟರ್ ವಿಜಿಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.