ಅದೊಂದು ಕಾಡಿನಲ್ಲಿ ನರಿಯು ಬಹುತೇಕ ಎಲ್ಲಾ ಪ್ರಾಣಿಗಳ ಮಾಂಸದ ‘ರುಚಿಯನ್ನು ನೋಡಿತ್ತು. ಆದರೆ ಕರಡಿಯ (bear) ಮಾಂಸದ ರುಚಿ ನೋಡಿರಲಿಲ್ಲ. ಹಾಗಾಗಿ ಅದು ಕರಡಿಯ ಸ್ನೇಹವನ್ನು ಸಂಪಾದಿಸಲು ಹಾತೊರೆಯುತ್ತಿತ್ತು.
ಒಂದು ಸಲ ಕರಡಿಯು ತನ್ನ ಗುಹೆಯಿಂದ ಹೊರಬಂದು ಆಹಾರಕ್ಕಾಗಿ ಹೊರಟಿತ್ತು. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನರಿಯು ಕರಡಿಯ ಹತ್ತಿರ ಬಂದಿತು.
‘ಗೆಳೆಯಾ ನನಗೆ ನಿನ್ನ ಸ್ನೇಹ ಬೇಕು. ನೀನು ಬಯಸುವುದಾದರೆ ನಾವಿಬ್ಬರೂ ಇಂದಿನಿಂದ ಸ್ನೇಹಿತರಾಗೋಣ…’ ಎಂದು ಕುಹಕ ನುಡಿಗಳನ್ನಾಡಿತು. ಕೂಡಲೆ ಕರಡಿಯು ನರಿಯ ಸ್ನೇಹಕ್ಕೆ ಸಮ್ಮತಿ ಸೂಚಿಸಿತು. ಕೆಲವು ದಿನಗಳವರೆಗೆ ನರಿಯು ಒಳ್ಳೆಯ ಸ್ನೇಹಿತನಂತೆ ನಟಿಸಿತು.
ಒಂದು ದಿನ ನರಿಯು ಕರಡಿಗೆ ‘ಮಿತ್ರಾ ನಿನ್ನ ಮೈ ಮೇಲಿನ ರೋಮಗಳು ನಿನಗೆ ಭಾರವೆನಿಸುವುದಿಲ್ಲವೇ? ನೋಡಲು ಸಹ ತುಂಬಾ ಅಸಹ್ಯವಾಗಿ ಕಾಣಿಸುತ್ತವೆ! ಒಮ್ಮೆ ನಿನ್ನ ರೋಮಗಳನ್ನು ಕತ್ತರಿಸಿಕೊಂಡುಬಿಡು. ನಂತರ ನೀನು ಬಯಸುವುದಾದರೆ ಮತ್ತೆ ರೋಮಗಳನ್ನು ಮೊದಲಿನಂತೆಯ ಬಿಡಬಹುದು’ ಎಂದು ಕುಟಿಲ ಮಾತುಗಳನ್ನಾಡಿತು.
ನರಿಯ ಕಪಟ ನುಡಿಗಳು ಕರಡಿಗೆ ಸಮಂಜಸವೆನಿಸಿದವು. ನಂತರ ಅದು ನರಿಗೆ ‘ಮಿತ್ರಾ ನಿನ್ನ ಇಚ್ಛೆಯಂತೆಯೇ ನನ್ನ ಮೈಮೇಲಿನ ರೋಮಗಳನ್ನು ಒಂದೂ ಬಿಡದೆ ಕತ್ತರಿಸಿ ಹಾಕಿಬಿಡು’ ಎಂದು ಪ್ರೀತಿಯಿಂದ ಹೇಳಿತು. ತಕ್ಷಣವೆ ನರಿಯು ಒಂದು ಹರಿತವಾದ ವಸ್ತುವನ್ನು ತಂದು ಕರಡಿಯ ಮೈಮೇಲಿನ ರೋಮಗಳನ್ನು ಬಿಡದೆ ಕತ್ತರಿಸಿಹಾಕಿತು. ನಂತರ ಅದರ ಮೈಮೇಲೆ ಬಿದ್ದು ಭಕ್ಷಿಸತೊಡಗಿತು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)