ಹಾಸನ; ಮದುವೆಯಾಗಲು ನಿರಾಕರಿಸಿ ದೂರಾದ ಪ್ರಿಯತಮೆಯ ಮೇಲೆ ಪ್ರಿಯತಮನೊಬ್ಬ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ (Crime news) ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಿನ್ನೆ ನಡೆದಿದೆ.
ಆಲೂರು ತಾಲೂಕು ಕಾರುಗೋಡು ಗ್ರಾಮದ ಮೋಹಿತ್ ತನ್ನ ಪ್ರೇಯಸಿ ಗಾನವಿ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದು, ಗಾಯಗೊಂಡಿರುವ ಯುವತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಮೋಹಿತ್ ಹಾಗೂ ಗಾನವಿ ನಡುವೆ ಬಿರುಕು ಮೂಡಿತ್ತು. ಹೀಗಾಗಿ ಗಾನವಿ ಪ್ರಿಯಕರನಿಂದ ದೂರಾಗಿದ್ದಳು. ಆದರೆ ತನ್ನನ್ನೇ ಮದುವೆಯಾಗುವಂತೆ ಮೋಹಿತ್ ಬೆಂಬಿಡದೆ ಕಾಡುತ್ತಿದ್ದ.
ಆತನ ಕಾಟದಿಂದ ಬೇಸತ್ತಿದ್ದ ಯುವತಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು. ಇದರಿಂದ ಎರಡೂ ಕುಟುಂಬಗಳು ರಾಜಿ ಸಂಧಾನಕ್ಕೆ ಮುಂದಾಗಿದ್ದವು. ಇಬ್ಬರೂ ಇನ್ನು ಮುಂದೆ ಯಾರ ತಂಟೆಗೂ ಹೋಗಬಾರದು ಎಂದು ಮಾತುಕತೆ ನಡೆದಿತ್ತು.
ಈ ಸಂಬಂಧ ಮುಚ್ಚಳಕೆ ಬರೆದು ನೋಟರಿಯಿಂದ ದೃಢೀಕರಣ ಪಡೆಯಲೆಂದು ಬಂದಿದ್ದ ಕುಟುಂಬದ ಸದಸ್ಯರ ಜತೆ ಗಾನವಿ ಪಟ್ಟಣ ಪಂಚಾಯಿತಿ ಮುಂಭಾಗ ನಿಂತಿದ್ದರು. ಈ ವೇಳೆ ಪಾನಮತ್ತನಾಗಿ ಸ್ಥಳಕ್ಕೆ ಬಂದ ಮೋಹಿತ್ ಮಾರಕಾಸ್ತ್ರದಿಂದ ಗಾನವಿ ಮೇಲೆ ದಾಳಿ ಮಾಡಿದ ಇದರಿಂದ ಆಕೆಯ ತಲೆ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ.
ಹಲ್ಲೆ ನಡೆಸಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದಯ, ಗಾಯಾಳುವನ್ನು ಕುಟುಂಬದ ಸದಸ್ಯರು ತಕ್ಷಣ ಹಾಸನದ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.
ಈ ಕುರಿತು ಅಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.