ಬೆಂಗಳೂರು: ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪ ಹೊತ್ತಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಇಂದು ನಡೆದಿದ್ದು, ಸಂಜೆ ನಾಲ್ಕು ಗಂಟೆಗೆ ಮುಂದೂಡಲಾಗಿದೆ.
ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ತಮ್ಮ ವಾದ ಮುಂದಿಟ್ಟಿದ್ದು, ಹತ್ಯೆ ಒಳಗಾದ ವ್ಯಕ್ತಿಯನ್ನು ಕಿಡ್ನಪ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಕಿಡ್ನಪ್ ಒಳಗಾದ ವ್ಯಕ್ತಿ ಬಾರ್‌ನಲ್ಲಿ ಪೋನ್ ಮಾಡಿದ್ದಾನೆ.. ಇದು ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗುವಾಗ ಬಾರ್ಗೆ ಹೋಗಿದ್ದಾರೆ. ಸಾವನಪ್ಪಿರುವ ವ್ಯಕ್ತಿ ಫೋನ್ ಪೇ ಮೂಲಕ ಬಾರ್ಗೆ ಹಣ ಪಾವತಿಸಿದ್ದಾನೆ. ಈ ಬಗ್ಗೆ ಬಾರ್ನ ಮಾಲೀಕನ ಹೇಳಿಕೆ ದಾಖಲಿಸಲಾಗಿದೆ.
ಅಪಹರಣಕ್ಕೊಳಗಾದವನು 640 ರೂಪಾಯಿ ಹಣವನ್ನು ಫೋನ್ ಪೇ ಮೂಲಕ ಹಣ ನೀಡಲು ಸಾಧ್ಯವೇ ಎಂದು ನಾಗೇಶ್ ಅವರು ವಾದ ಮಂಡಿಸಿದ್ದಾರೆ.
ಯಾವುದೇ ಮೋಸದಿಂದ ಅಥವಾ ಬಲವಂತದಿಂದ ಹತ್ಯೆಯಾದ ವ್ಯಕ್ತಿಯ ಕಿಡ್ನ್ಯಾಪ್ ಮಾಡಲಾಗಿಲ್ಲ ಎಂಬ ವಿಚಾರವನ್ನು ವಕೀಲರು ಹೇಳಿದ್ದಾರೆ. ಈಗಾಗಲೇ ಮೃತನ ತಂದೆಯ ಹೇಳಿಕೆಯನ್ನು ಪಡೆಯಲಾಗಿದೆ. ಅದರಲ್ಲಿ ಜೂ.8ರಂದು ಸಾವನಪ್ಪಿರುವ ವ್ಯಕ್ತಿ ಎಂದಿನಂತೆ ಕೆಲಸಕ್ಕೆ ಹೋದ ಬಗ್ಗೆ ವರದಿ ಇದೆ.
ನಾಲ್ವರು ಸ್ನೇಹಿತರೊಂದಿಗೆ ಹೋಗುತ್ತೇನೆಂದು ತಾಯಿ ಬಳಿ ಹೇಳಿದ್ದಾಗಿ ಹೇಳಿಕೆ ದಾಖಲಿಸಲಾಗಿದೆ. ಹತ್ಯೆಯಾದ ವ್ಯಕ್ತಿ ದಿನನಿತ್ಯ ಧರಿಸುವ ಯೂನಿಫಾರ್ಮ್ ಧರಿಸಿರಲಿಲ್ಲ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲವೆಂದು ಫೋನ್ ಮಾಡಿ ತಿಳಿಸಿದ್ದ. ಹೀಗಾಗಿ ಇದನ್ನು ಕಿಡ್ನ್ಯಾಪ್ ಎಂದು ಹೇಳಲು ಸಾಧ್ಯವಿಲ್ಲ. ಇದರಲ್ಲಿ ಒತ್ತಾಯವೂ ಇಲ್ಲ, ಮೋಸವೂ ಇಲ್ಲ ಎಂದು ವಕೀಲರು ವಾದ ಮಂಡಿಸಿದ್ದಾರೆ.
ಅಲ್ಲದೆ ಕೊಲೆಯಾಗಿದೆಯೋ ಇಲ್ಲವೋ ಬೇರೆ ವಿಚಾರ. ಆದರೆ ಕೊಲೆಯ ಉದ್ದೇಶದಿಂದ ಕಿಡ್ನ್ಯಾಪ್ ಆಗಿಲ್ಲ. ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು ಸಾಕ್ಷ್ಯನಾಶವಲ್ಲ ಎಂದಿರುವ ಸಿವಿ ನಾಗೇಶ್ ಅವರು ಅಲಹಾಬಾದ್ ಹೈಕೋರ್ಟ್ನ ತೀರ್ಪು ಉಲ್ಲೇಖಿಸಿದ್ದಾರೆ.
ಮೃತದೇಹವನ್ನು ಸುಟ್ಟುಹಾಕಿದ್ದರೆ ಸಾಕ್ಷ್ಯನಾಶ ಪರಿಗಣಿಸಬಹುದಿತ್ತು. ಆದರೆ ಆ ರೀತಿ ಆಗಿಲ್ಲ, ಕೇವಲ ಮೃತದೇಹ ಸ್ಥಳಾಂತರಿಸಲಾಗಿದೆ ಎಂದು ನಾಗೇಶ್ ಹೇಳಿದ್ದಾರೆಂದು ವರದಿಯಾಗಿದೆ.
ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಆರೋಪ ದರ್ಶನ್ ಮೇಲೆ ಇದೆ. ಅಪಾರ್ಟ್ಮೆಂಟ್ ಕಾವಲುಗಾರ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲು ಮಾಡಿಕೊಳ್ಳಲಾಯಿತು. ಇಲ್ಲಿ ಮೃತದೇಹದ ಮಹಜರು, ಪೋಸ್ಟ್ ಮಾರ್ಟಂ ವಿಳಂಬ ಮಾಡಲಾಗಿದೆ. 1.5X2.5 ಸೆಂ.ಮೀ. ಗಾಯ ಬಿಟ್ಟರೆ ಉಳಿದವು ರಕ್ತಗಾಯಗಳಿಲ್ಲ ಎಂದಿದ್ದಾರೆ ನಾಗೇಶ್.
ಶವ ಶೈತ್ಯಾಗಾರದಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ. ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯ ಅಂದಾಜಿಸಲಾಗಿದೆ. ಶವಪರೀಕ್ಷೆ ವರದಿ ಒಂದು ತಿಂಗಳು ವಿಳಂಬವಾಗಿ ಬಂದಿದೆ ಎಂದು ಸಿವಿ ನಾಗೇಶ್ ವಾದ ಮಾಡಿದ್ದಾರೆ. ಈ ಮೂಲಕ ದರ್ಶನ್ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಸೂಕ್ಷ್ಮ ಸೂಕ್ಷ್ಮ ವಿಚಾರಗಳನ್ನು ಹಿಡಿದು ನ್ಯಾಯಾಧೀಶರ ಗಮನಕ್ಕೆ ತರುತ್ತಿರುವ ಕುರಿತು ವರದಿಯಾಗಿದೆ.