ಬೀದರ್: BJP ಪಕ್ಷದ ವರಿಷ್ಠರ ಅನುಮತಿ ಇಲ್ಲದೆಯೇ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಹೋರಾಟ ಸೋಮವಾರ ಬೀದರ್ ಮೂಲಕ ಆರಂಭವಾಯಿತು.
ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಬಿಜೆಪಿಯ ಬಂಡಾಯ ನಾಯಕರೆಂದೆ ಕರೆಯಲ್ಪಡುತ್ತಿರುವ ಮಾಜಿ ಸಚಿವರಾದ ರಮೇಶ್ ಜಾರಕಿ ಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ ಸಿದ್ದೇಶ್ವರ್, ಶಾಸಕ ಬಿ.ಪಿ ಹರೀಶ್, ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್, ಈಶ್ವರ ಸಿಂಗ್ ಠಾಕೂರ್ ಮತ್ತಿತರ ಮುಖಂಡರಿದ್ದ ಈ ಬಣ ಜಿಲ್ಲೆಯ ವಿವಿಧೆಡೆ ರೈತರು, ಸಾರ್ವಜನಿಕರಿಂದ ವಕ್ಫ್ ವಿರುದ್ಧದ ಅಹವಾಲು ಸ್ವೀಕರಿಸಿ ಜನ ಜಾಗೃತಿ ಮೂಡಿಸಿತು.
ಈ ವೇಳೆ ಮಾತನಾಡಿದ ಯತ್ನಾಳ, ವಕ್ಫ್ ಆಸ್ತಿ ಉಳಿಸೋಕೆ 5 ಲಕ್ಷ ಜನ ಸೇರುತ್ತಾ ರಂತೆ, ನಾವು ನಮ್ಮ ಆಸ್ತಿ ಉಳಿಸಿಕೊಳ್ಳಲು 25 ಲಕ್ಷ ಜನ ಸೇರೋಣ ಅಂತ ಕರೆ ನೀಡೋಣ. ನಾವೆಲ್ಲ ಇಲ್ಲಿ ವಿವಾದ ಮಾಡಲು ಬಂದಿಲ್ಲ, ಹಿಂದೂ ಸಮಾಜ ಉಳಿಸಲು ಬಂದಿದ್ದೇವೆ ಎಂದು ಹೇಳಿದರು.
ನರಸಿಂಹ ದೇವಸ್ಥಾನಕ್ಕೆ ಭೇಟಿ: ವಕ್ಫ್ ವಿರುದ್ಧದ ಹೋರಾಟಕ್ಕೆ ಚಾಲನೆ ನೀಡುವ ಮೊದಲು ಶಾಸಕ ಯತ್ನಾಳ್ ನೇತೃತ್ವದ ತಂಡ ಸುಕ್ಷೇತ್ರ ನರಸಿಂಹ ಝರಣಾ ದೇವ ಸ್ನಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿತು.
ಧರ್ಮಾಪುರ ಗ್ರಾಮಕ್ಕೆ ತೆರಳಿ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿತು. ತರುವಾಯ ಬೀದರ್ ಮಾರ್ಗ ಮಧ್ಯೆ ಮಾಜಿ ಶಾಸಕ ದಿ.ನಾರಾಯಣರಾವ್ ಮನಳಿ ಮನೆಗೆ ಭೇಟಿ ನೀಡಿ, ಅವರ ಕುಟುಂಬದ ಜತೆಗೆ ಕೆಲಕಾಲ ಮಾತುಕತೆ ನಡೆಸಿದರು.
ಬೀದರ್‌ನಗರದ ಗಣೇಶ ಮೈದಾನದಲ್ಲಿ ಸಾರ್ವಜನಿಕರಿಂದ ಬೃಹತ್ ಸಭೆ ನಡೆಸಿ, ಅಹವಾಲು ಸ್ವೀಕರಿಸಲಾಯಿತು. ಆ ಬಳಿಕ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪಾದಯಾತ್ರೆ ನಡೆಸಿ ವಕ್ಫ್ ವಿರುದ್ಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಳಿ ಚಟ್ನಳ್ಳಿಗೆ ತೆರಳಿ ಅಲ್ಲೂ ರೈತರಿಂದ ಅಹವಾಲು ಸ್ವೀಕರಿಸಿ, ನಂತರ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿಗೆ ರಾತ್ರಿ ವೇಳೆ ತೆರಳಿ ವಕ್ ವಿರುದ್ಧ ಜನಾಂದೋಲನ ನಡೆಸಿದ್ದಲ್ಲದೆ, ಮನವಿ ಪತ್ರ ಸ್ವೀಕರಿಸಿತು.
ದೂರು: ವಕ್ಫ್ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದ ತಂಡ ನಡೆಸುತ್ತಿರುವ ಪ್ರವಾಸ ಅನುಮತಿ ರಹಿತವಾಗಿದ್ದು, ಅವರ ವಿರುದ್ಧ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ತಿಳಿಸಿದ್ದಾರೆ.
ಸೋಮವಾರ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷ. ಯತ್ನಾಳ ಅವರ ನಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರು ಕೋರ್‌ಕಮಿಟಿ ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಯತ್ನಾಳ್ ಅವರು ಮಾಡುವ ಹೋರಾಟಕ್ಕೆ ರಾಷ್ಟ್ರೀಯ ನಾಯಕರ ಅನುಮತಿ ಪಡೆದಿಲ್ಲ. ರಾಜ್ಯ ನಾಯಕರು, ಜಿಲ್ಲಾ ನಾಯಕರಿಂದಲೂ ಅನುಮತಿ ಪಡೆದಿಲ್ಲ; ಹಾಗಾಗಿ ಅದು ಪಕ್ಷದ ಹೋರಾಟ ಆಗುವುದಿಲ್ಲ. ಅದು ಪಕ್ಷದ ಅಶಿಸ್ತು ಕೂಡ ಆಗುತ್ತದೆ. ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಪಕ್ಷದ ನಿಯಮ- ಶಿಸ್ತನ್ನು ಉಲ್ಲಂಘಿಸಿ ಹೇಳಿಕೆ ಕೊಟ್ಟರೆ, ಹೋರಾಟ ಮಾಡಿದರೆ ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಲ್ಲಿನವರೆಗೆ ರಾಜ್ಯದ ಹಂತದಲ್ಲೇ ಸಮಸ್ಯೆ ಸರಿಪಡಿಸುವ ಪ್ರಯತ್ನ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಳ್ಳಲಿಲ್ಲ. ಯತ್ನಾಳ ಅವರ ಈ ಕ್ರಮದ ಕುರಿತು ರಾಷ್ಟ್ರನಾಯಕರ ಗಮನಕ್ಕೆ ತರುತ್ತೇವೆ. ಅವರ ವಿರುದ್ಧ ರಾಷ್ಟ್ರೀಯ ನಾಯಕರಿಗೆ ವರದಿ ಕೊಡುತ್ತೇವೆ ಎಂದು ರಾಜೀವ್ ತಿಳಿಸಿದರು.