ಶ್ರೀರಂಗಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಡಾ ಹಗರಣದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಆದರೆ ಉಪಚುನಾವಣೆಯ ಫಲಿತಾಂಶವನ್ನೇ ಕ್ಲೀನ್ ಚಿಟ್ ಎನ್ನುತ್ತಿದ್ದಾರೆ. ಇದು ಕ್ಲೀನ್ ಚಿಟ್ ಅಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (RAshoka) ಹೇಳಿದರು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಗ್ಗಳ್ಳಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಲ್ಲಿಯವರೆಗೆ ಬಡವರಿಗೆ ನ್ಯಾಯ ಸಿಗುವುದಿಲ್ಲವೋ, ಅಲ್ಲಿವರೆಗೆ ಪಾಪಿಗಳ ಸರ್ಕಾರ ಎಂದು ಹೇಳುತ್ತೇನೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಮೂರು ಸೀಟು ಗೆದ್ದಿದೆ. ಆದರೆ ಬಿಜೆಪಿ ಅಂದು 18 ಸೀಟು ಗೆದ್ದಿತ್ತು. ಮುಂದಿನ ವರ್ಷಗಳಲ್ಲಿ ಕಾಂಗ್ರೆಸ್ ಕೂಡ ಸೋತು ಮೂರು ನಾಮ ಹಾಕಿಕೊಳ್ಳಲಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಭಯದಿಂದಾಗಿ ಅನೇಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಇದು ಭವಿಷ್ಯ ಹೇಳುವ ಚುನಾವಣೆಯಲ್ಲ ಎಂದರು.
ಚುನಾವಣಾ ಫಲಿತಾಂಶವನ್ನು ಕ್ಲೀನ್ ಚಿಟ್ ಎನ್ನಲಾಗುವುದಿಲ್ಲ. ಕ್ಲೀನ್ ಚಿಟ್ ಅನ್ನು ನ್ಯಾಯಾಲಯ ಕೊಡಬೇಕಿದೆ. 14 ಸೈಟುಗಳನ್ನು ಲೂಟಿ ಮಾಡಿದ ಸಿಎಂ ಸಿದ್ದರಾಮಯ್ಯ ಅದನ್ನು ಬಡವರಿಗೆ ನೀಡಬೇಕಿತ್ತು. ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಆರೋಪಕ್ಕೆ ಸಾಕ್ಷಿ ಇಲ್ಲದೆ ಪ್ರಕರಣ ಬಿದ್ದುಹೋಗಿದೆ. ಇದನ್ನೇ ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜನರ ಮೇಲೆ ತೆರಿಗೆ ಹೊರೆ ಹೇರಿದೆ. ಜೊತೆಗೆ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ ಎಂದು ದೂರಿದರು.
ಬಡವರ ಪರ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಎಷ್ಟು ಜಲಾಶಯ ನಿರ್ಮಿಸಿದ್ದಾರೆ? ಮೇಕದಾಟು ಎಂದು ಪ್ರತಿಭಟನೆ ಮಾಡಿ, ಅಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಮಾಡಿಲ್ಲ. ಒಂದೇ ಒಂದು ಆಸ್ಪತ್ರೆ ಕೂಡ ನಿರ್ಮಿಸಿಲ್ಲ. ಆದರೆ ಆಸ್ಪತ್ರೆಯಲ್ಲಿ ಶುಲ್ಕಗಳನ್ನು ಮಾತ್ರ ಏರಿಸಲಾಗಿದೆ. ಎಲ್ಲವೂ ಉಚಿತ ಎಂದು ಸುಳ್ಳು ಹೇಳಿ ಈಗ ಎಲ್ಲ ದರಗಳನ್ನು ಏರಿಸಲಾಗಿದೆ. ಮಹಿಳೆಯರಿಗೆ 2,000 ರೂ. ನೀಡುತ್ತಿದ್ದೇವೆ ಎಂದು ಹೇಳಿ ಇಡೀ ಕುಟುಂಬದ ಆರ್ಥಿಕತೆಯನ್ನು ಗುಡಿಸಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ವಕ್ಫ್ ಮಂಡಳಿಯಿಂದ ಹಿಂದೂ ದೇವಸ್ಥಾನಗಳ ಜಾಗ ಕಬಳಿಕೆಯಾಗಿದೆ. ಲಿಂಗಾಯತರ ಮಠದ ಜಾಗ, ಸ್ಮಶಾನ, ರೈತರ ಜಮೀನನ್ನು ತನ್ನದೇ ಎಂದು ವಕ್ಫ್ ಘೋಷಿಸಿಕೊಂಡಿದೆ. ಶ್ರೀರಂಗಪಟ್ಟಣದ ದೇವಸ್ಥಾನದ ಜಾಗವನ್ನು ಕೂಡ ವಕ್ಫ್ ಕಬಳಿಸಿದೆ. ಇಲ್ಲಿನ ಎಲ್ಲ ಭೂಮಿ ಮುಸ್ಲಿಮರದ್ದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದರು. ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ ಏನೂ ಉಳಿಯುವುದಿಲ್ಲ ಎಂದರು.
ಇದು ಹಣದ ಗೆಲುವು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪಚುನಾವಣೆ ಹಣದ ಗೆಲುವೇ ಹೊರತು ಕಾಂಗ್ರೆಸ್ ಗೆಲುವಲ್ಲ. ಮೂರು ಕ್ಷೇತ್ರಗಳ ಗೆಲುವಿಗೆ ಕಾಂಗ್ರೆಸ್ ಅನವಶ್ಯಕವಾಗಿ ಬೀಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸೋತಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎಂಬುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಒಪ್ಪುವುದಿಲ್ಲ. ಕಾಂಗ್ರೆಸ್‌ಗೆ ಅಭ್ಯರ್ಥಿಯ ಗತಿ ಇಲ್ಲ ಎಂಬ ಕಾರಣಕ್ಕೆ ಬಿಜೆಪಿಯಲ್ಲಿದ್ದವರನ್ನು ಕರೆಸಿಕೊಳ್ಳಲಾಗಿದೆ. ಈ ಸೋಲಿನಿಂದ ಬಿಜೆಪಿಗೆ ಯಾವುದೇ ರೀತಿಯ ಹಿನ್ನಡೆಯಾಗುವುದಿಲ್ಲ. ಇದು ಬಿಜೆಪಿಗೆ ಮಾನದಂಡವೂ ಅಲ್ಲ ಎಂದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ. ಈ ಸೋಲನ್ನೇ ಗೆಲುವಾಗಿ ಪರಿವರ್ತಿಸಲಾಗುವುದು ಎಂದರು.