ರಾಜ ವೀರಸಂಗ (Raja Veerasanga) ಅಸಮಾನ್ಯ ವೀರನಿದ್ದ ಮತ್ತು ‘ನ್ಯಾಯಯುತವಾಗಿ ರಾಜ್ಯವನ್ನಾಳುತ್ತಿದ್ದ.
ಆತ ತನ್ನ ಪ್ರಜೆಗಳ ಯೋಗಕ್ಷೇಮವನ್ನು ತುಂಬಾ ಉತ್ಸುಕತೆಯಿಂದ ವಿಚಾರಿಸಿಕೊಳ್ಳುತ್ತಿದ್ದ. ಪ್ರಜೆಗಳ ಕಷ್ಟ- ಸುಖ ತಿಳಿಯಲು ಅನೇಕ ಮಂದಿ ಬೇಹುಗಾರರನ್ನು ನೇಮಿಸಿದ್ದಲ್ಲದೆ ತಾನೇ ಸ್ವತಃ ಹೋಗಿ ಜನರನ್ನು ಭೇಟಿ ಮಾಡುತ್ತಿದ್ದನು.
ಒಂದು ದಿನ ಭೇಟಿಗೆಂದು ಹೋದಾಗ ಹೆಬ್ಬಾಗಿಲಿನ ಬಳಿ ಒಬ್ಬ ಅಪರಿಚಿತ ಯುವಕನನ್ನು ಕಂಡ. ಆತನ ಬಳಿ ಒಂದು ಹುಂಜವಿದ್ದಿತು. ರಾಜನನ್ನು ಕಂಡಕೂಡಲೆ ಆತ ನಮಸ್ಕರಿಸಿ, ‘ಮಹಾಪ್ರಭು ನಾನು ತಮ್ಮ ಹೆಸರಿನಲ್ಲಿ ಪಂದ್ಯ ಕಟ್ಟಿ ಈ ಹುಂಜವನ್ನು ಗೆದ್ದಿದ್ದೇನೆ. ನಾನು ನಿಮ್ಮ ಹೆಸರಿನಲ್ಲಿ ಗೆದ್ದಿರುವುದರಿಂದ ಇದು ನಿಮಗೇ ಸೇರಬೇಕಾದುದು. ದಯವಿಟ್ಟು ಒಪ್ಪಿಸಿಕೊಳ್ಳಿ ಇದನ್ನು’ ಎನ್ನುತ್ತಾ ಮುಂದೆ ಬಂದಾಗ ರಾಜನಿಗೆ ಖುಷಿಯಾಯಿತು.
‘ಆಯ್ತು ಹೋಗು ಇದನ್ನು ಕೋಳಿಗೂಡಿನಲ್ಲಿಡು’ ಎಂದಾಗ ಆ ಯುವಕ ಹಾಗೆಯೇ ಮಾಡಿ ಹೊರಟು ಹೋದನು. ಕೆಲವು ದಿನಗಳ ತರುವಾಯ ಮತ್ತೆ ಆ ಯುವಕ ರಾಜನ ಮುಂದೆ ಪ್ರತ್ಯಕ್ಷನಾದನು. ಈ ಸಲ ಅವನ ಬಳಿ ಮೇಕೆಯೊಂದಿತ್ತು.
‘ಮಹಾಪ್ರಭು, ಈ ದಿನ ನಾನು ತಮ್ಮ ಹೆಸರಿನಲ್ಲಿ ಜೂಜಾಡಿ ಈ ಮೇಕೆ ಗೆದ್ದೆ. ದಯಮಾಡಿ ಸ್ವೀಕರಿಸಿ’ ಎಂದು ವಿನಂತಿಸಿದನು. ಈಗಲೂ ರಾಜನಿಗೆ ಸಂತಸ ಉಂಟಾಗಿ ‘ಹೋಗು. ಇದನ್ನು ನಮ್ಮ ಅರಮನೆ ಕುರಿ ದೊಡ್ಡಿಗೆ ಸೇರಿಸು’ ಎಂದು ಆಜ್ಞಾಪಿಸಿದನು. ಆ ಯುವಕ ಮೇಕೆಯನ್ನು ಕುರಿಗಾಹಿಯ ವಶಕ್ಕೆ ಒಪ್ಪಿಸಿ ಹೋದನು.
ಮತ್ತಷ್ಟು ದಿನಗಳು ಕಳೆದ ತರುವಾಯ ಆ ಹುಡುಗ ಮತ್ತೆ ರಾಜನ ಮುಂದೆ ಬಂದು ನಿಂತನು. ಈ ಸಲ ಅವನ ಜೊತೆ ಇನ್ನಿಬ್ಬರು ಬಂದಿದ್ದರು. ಈ ಬಾರಿ ಆತ ದುಖದಿಂದ ‘ಮಹಾಪ್ರಭು ಮತ್ತೆ ತಮ್ಮ ಹೆಸರಿನಲ್ಲಿ ಪಣ ಕಟ್ಟಿ, ಜೂಜಾಡಿ ಸೋತು ಬಿಟ್ಟೆ, ಬಾಜಿ ಹಣ ಕಳೆದುಕೊಂಡೆ. ಹೀಗಾಗಿ ಇಲ್ಲಿಗೆ ಬಂದಿರುವ ಇವರಿಬ್ಬರಿಗೂ ಐದು ನೂರು ವರಹ ಕೊಡಿರಿ. ಇಲ್ಲವಾದರೆ ಇವರು ನನ್ನನ್ನು ಕೊಂದೇ ಬಿಡುತ್ತಾರೆ’ ಎಂದು ಗೋಗರೆದನು.
ಈಗ ರಾಜನಿಗೆ ತನ್ನ ತಪ್ಪಿನ ಅರಿವಾಯ್ತು. ಆ ಅಪರಿಚಿತ ಯುವಕನಿಂದ ಉಡುಗೊರೆ ಸ್ವೀಕರಿಸಬಾರದಿತ್ತು ಎಂದುಕೊಂಡು ಬಂದಿದ್ದ ಅವರಿಬ್ಬರಿಗೆ ತಲಾ ಐದು ನೂರು ವರಹ ಕೊಟ್ಟು ಕಳುಹಿಸಿದ. ಮತ್ತೆ ಇನ್ನೆಂದಿಗೂ ತನ್ನ ಹೆಸರಿನಲ್ಲಿ ಜೂಜಾಡ ಬೇಡವೆಂದು ತಾಕೀತು ಮಾಡಿದನು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)