ದೊಡ್ಡಬಳ್ಳಾಪುರ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಸೋಲಿಗೆ ಬಿಜೆಪಿ ನಾಯಕರ ಷಡ್ಯಂತ್ರ ಕಾರಣ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಸೋಲಿನ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಮೈತ್ರಿ ಧರ್ಮವನ್ನು ಪಾಲನೆ ಮಾಡದೆ ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಇನ್ನಿಲ್ಲದಂತೆ ಮಾಡುವ ರಾಜಕೀಯ ಕುತಂತ್ರದಿಂದಾಗಿ ನಿಖಿಲ್ ಸೂಲಿಗೆ ಕಾರಣವಾಗಿದೆ.
ಚುನಾವಣೆ ಮುನ್ನವೇ ಯೋಗೇಶ್ವರ್ ಅವರನ್ನು ಎತ್ತಿಕಟ್ಟಿ ಕಾಂಗ್ರೆಸ್ ಗೆ ಕಳುಹಿಸಿ ನಿಖಿಲ್ ಸೋಲಿಗೆ ಬಿಜೆಪಿ ಮುಖಂಡರು ಕುತಂತ್ರ ಆರಂಭಿಸಿದರು. ಇದೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯೋಗೇಶ್ವರ್ ಗೆ ಶುಭಾವಾಗಲಿ ಎಂದಿದ್ದರು. ಅಲ್ಲದೆ ಚುನಾವಣೆಯಲ್ಲಿ ನೆಪ ಮಾತ್ರಕ್ಕೆ ಪ್ರಚಾರ ಮಾಡಿದ್ದು ಬಿಟ್ಟರೆ ಬಿಜೆಪಿ ಮತಗಳನ್ನು ದೊರಕಿಸಿಲ್ಲ.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕವಾಗಿ ಮೈತ್ರಿ ಧರ್ಮ ಪಾಲನೆ ಮಾಡಿದಕ್ಕೆ, ಈ ಚುನಾವಣೆಯಲ್ಲಿ ಬಿಜೆಪಿಯವರು ಜೆಡಿಎಸ್ ಬೆನ್ನಿಗೆ ಚೂರಿ ಇರಿದಿದ್ದಾರೆ.
ಕೇಂದ್ರದ ಬಿಜೆಪಿ ವರಿಷ್ಠರು ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವಿಶ್ವಾಸದಿಂದಿರುವುದನ್ನು ಸಹಿಸದ ರಾಜ್ಯದ ಬಿಜೆಪಿ ನಾಯಕರು ಕುಮಾರಸ್ವಾಮಿ, ಜೆಡಿಎಸ್ ವಿರುದ್ಧ ಷಡ್ಯಂತ್ರ ರೂಪಿಸಿರುವುದಕ್ಕೆ ನಿಖಿಲ್ ಕುಮಾರಸ್ವಾಮಿ ಅವರ ಸೋಲು ಸಾಕ್ಷಿಯಾಗಿದೆ.
ಬಿಜೆಪಿಯವರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ.
ಕಾಂಗ್ರೆಸ್ ಪಕ್ಷದ ಸೇರಿದ ಯೋಗೇಶ್ವರ್ ಗೆಲುವಿಗೆ ಇಡೀ ಸರ್ಕಾರವೇ ನಿಂತಿತು. ಆದರೆ ಬಿಜೆಪಿ ನಾಯಕರು ಮೇಲ್ನೋಟಕ್ಕೆ ಮಾತ್ರ ಪ್ರಚಾರ ಮಾಡಿದ್ದು, ಟಿವಿಗಳಲ್ಲಿ ಶೋ ನೀಡಿದ್ದು ಬಿಟ್ಟರೆ ನಿಖಿಲ್ ಅವರ ಗೆಲುವಿಗೆ ಪ್ರಮಾಣಿಕ ಮೈತ್ರಿ ಧರ್ಮ ಪಾಲನೆ ಮಾಡಿಲ್ಲ. ಇದಕ್ಕೆ ನೇರ ಹೊಣೆ ಹೊತ್ತು ಬಿಜೆಪಿಯ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂದು ಹರೀಶ್ ಗೌಡ ಆಗ್ರಹಿಸಿದ್ದಾರೆ.