daily story: ಸೋಮಪುರವೆಂಬ ಊರಿನ ಬಳಿ ಒಂದು ಸುಂದರವಾದ ಅರಣ್ಯವಿದ್ದಿತು. ದಟ್ಟ ಗಿಡ-ಮರ, ಪೊದೆಗಳಿಂದ ಕೂಡಿದ ಈ ಕಾಡಿನಲ್ಲಿ ಅಲ್ಲಲ್ಲಿ ಶುಭ್ರ ನೀರಿನ ತೊರೆಗಳೂ ಇದ್ದವು. ಇದರಿಂದ ಪ್ರಾಣಿ- ಪಕ್ಷಿಗಳು ಆನಂದದಿಂದ ವಾಸಿಸುತ್ತಿದ್ದವು.
ಇಂತಹ ಅರಣ್ಯದಲ್ಲಿ ಮೊಲವಿದ್ದಿತು. ತುಪ್ಪಳದಂತಹ ತನ್ನ ಶರೀರ, ಮಲ್ಲಿಗೆಯಂತಹ ಬಿಳುಪು ವರ್ಣ, ಉದ್ದನೆಯ ಕಿವಿಗಳು ತನ್ನ ಸೌಂದರ್ಯದ ಪ್ರತೀಕವೆಂದೇ ಅದು ಭಾವಿಸಿತ್ತು. ಅಲ್ಲದೆ ಚತುರತೆ, ಬುದ್ದಿವಂತಿಕೆಯಲ್ಲಿ ತನ್ನ ಸಮಾನರಿಲ್ಲ ಎಂದು ಅದು ಬೀಗುತ್ತಿತ್ತು. ಆದ್ದರಿಂದ ಇತರ ಪ್ರಾಣಿಗಳ ಜೊತೆ ದುರಹಂಕಾರದಿಂದಲೇ ವರ್ತಿಸುತ್ತಿತ್ತು.
ಹೀಗಿರಲು ಒಂದು ದಿನ ಅದಕ್ಕೆ ತಿನ್ನಲು ಕೆಂಪು ಕೆಂಪಾದ ಗಜ್ಜರಿ ದೊರೆತಿತ್ತು. ಹೊಟ್ಟೆ ತುಂಬಾ ತಿಂದ ಮೊಲ ಒಂದು ಮರದ ನೆರಳಲ್ಲಿ ವಿಶ್ರಮಿಸಿತು. ಅಲ್ಲೇ ನಿದ್ದೆ ಹತ್ತಿದ ಮೊಲಕ್ಕೆ ಏನೇನೋ ಕನಸು. ಆಕಾಶದ ತುಣುಕೊಂಡು ಜಾರಿ ಕೆಳಬಿದ್ದಂತೆ ಅದು ಕನಸು ಕಂಡಿತು. ಬೆದರಿದ ಮೊಲ ಕಣ್ಣೆರೆಯುವುಕ್ಕೂ, ಮೇಲಿನಿಂದ ಏನೋ ಭಾರೀ ಸದ್ದಿನಿಂದ ಕೆಳಗೆ ಬೀಳುವುದೂ ತಾಳೆಯಾಯಿತು. ಇದರಿಂದ ಕಂಗಾಲಾದ ಮೊಲ ಸತ್ತೆನೊ ಕೆಟ್ಟೆನೊ ಎಂದು ಓಡತೊಡಗಿತು.
ಆಗ ಜಿಂಕೆಯೊಂದು ಎದುರಾಯಿತು. ‘ಮೊಲರಾಯಾ, ಎಲ್ಲಿಗೆ ಓಡುವೆ?’ ಎಂದದು ಕೇಳಿತು.
‘ಅರೆ! ಆಕಾಶ ಕಳಚಿ ಬೀಳುತ್ತಿದೆಯಲ್ಲ, ನೀನೂ ಓಡು’ ಎನ್ನುತ್ತಾ ಓಡತೊಡಗಿತು. ಬುದ್ಧಿವಂತ ಮೊಲ ಹಾಗೆ ಹೇಳಿದಾಗ ಬಡ ಹರಿಣ ಬೆದರದಿರುತ್ತದೆಯೇ? ಅದೂ ಮೊಲದ ಹಿಂದೆಯೇ ಓಡತೊಡಗಿತು. ಅವೆರಡೂ ತುಸು ಮುಂದೆ ಸಾಗುತ್ತಿದ್ದಂತೆ ಕರಡಿಯೊಂದು ಎದುರಿಗೆ ಬಂದಿತು.
ಚಕಿತಗೊಂಡ ಅದು, ‘ನೀವಿಬ್ಬರೂ ತತ್ತರಿಸಿದಂತೆ ಓಡುತ್ತಿರುವಿರಲ್ಲ? ಏನು ವಿಶೇಷ?’ ಎಂದು ಕೇಳಿತು. ‘ಆಕಾಶ ಕಳಚಿ ಬೀಳುತ್ತಿದೆಯಲ್ಲಿ, ಓಡು, ಓಡು’ ಎನ್ನುತ್ತ ನಿಲ್ಲದೆ ಅವೆರಡೂ ಓಡಿದವು. ಹೆದರಿದ ಕರಡಿಯೂ ಅವನ್ನು ಹಿಂಬಾಲಿಸಿತು. ಹಾಗೆ ಅನೇಕ ಪ್ರಾಣಿಗಳು ಜತೆಗೂಡಿ ಧಾವಿಸತೊಡಗಿದವು.
ತುಸು ಮುಂದೆ ಕಾಡಿನ ರಾಜ ಸಿಂಹ ಎದುರಾಯಿತು. ಇವರ ಓಟ ಕಂಡು ಅದು ಘರ್ಜಿಸಿತು, ‘ಎಲ್ಲಿ ಓಡುತ್ತಿರುವಿರಿ? ನಿಲ್ಲಿ, ನಿಲ್ಲಿ’ ಎಂದಿತು.
ಪ್ರಾಣಭಯದಿಂದ ತತ್ತರಿಸುತ್ತಿದ್ದ ಪ್ರಾಣಿಗಳು ವಿಧಿ ಇಲ್ಲದೆ ತಮ್ಮ ಓಟ ನಿಧಾನಗೊಳಿಸಿ ರಾಜನಿಗೆ ತಮ್ಮ ಓಟದ ಕಾರಣ ತಿಳಿಸಿದವು.
‘ಮೊಲವೇ, ಆಕಾಶ ಬಿದ್ದ ಜಾಗ ನನಗೆ ತೋರಿಸು, ಎಲ್ಲರೂ ಬನ್ನಿ’ ಎಂದಿತು ಸಿಂಹ. ಎಲ್ಲರಿಗೂ ಹಿಂದಿರುಗಲು ಭಯ. ಆದರೆ ಸಿಂಹರಾಜನ ಮಾತು ಮೀರುವುದುಂಟೇ ಎಂದು ಹೆದರುತ್ತಾ, ಬೆದರುತ್ತಾ ಸ್ಥಳ ತಲಪಿದವು. ಅಲ್ಲೊಂದು ತೆಂಗಿನಕಾಯಿ ಬಿದ್ದಿತ್ತು. ಸಿಂಹ ಮೇಲೆ ನೋಡಿದಾಗ ಮಂಗವೊಂದು ಕಾಣಿಸಿತು. ಮಂಗವನ್ನು ಕೇಳಿದಾಗ, ತೆಂಗಿನಕಾಯಿ ತನ್ನ ಕೈಯಿಂದ ಜಾರಿ ಕೆಳಗೆ ಬಿದ್ದಿತೆಂದು ಅದು ಹೇಳಿತು.
‘ನೋಡಿದೆಯಾ ಮೊಲರಾಯಾ, ನಿನ್ನ ಆಕಾಶದ ತುಣುಕು. ಬುದ್ಧಿವಂತವೆಂದು ಬೀಗುತ್ತಿದ್ದೆಯಲ್ಲಾ? ಇದೇ ಏನು ನಿನ್ನ ಬುದ್ದಿವಂತಿಕೆ?’ ಎಂದು ಜೋರಾಗಿ ಸಿಂಹರಾಜ ನಗಲಾರಂಭಿಸಿತು. ಇದನ್ನು ಕಂಡು ಇತರ
ಪ್ರಾಣಿಗಳೂ ಬಿದ್ದು ಬಿದ್ದು ನಗತೊಡಗಿದವು. ಅಪಮಾನದಿಂದ ಕೆಂಪಾದ ಮೊಲ, ಅಂದಿನಿಂದಲೇ ತನ್ನ ಅಹಂಕಾರ ಬಿಟ್ಟು ಎಲ್ಲರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸತೊಡಗಿತು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)