ಆನೇಕಲ್: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ (Murder news) ಮಾಡಿರುವ ಘಟನೆ ಗುರುವಾರ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಗಡಿ ಗ್ರಾಮವಾದ ಬಳ್ಳೂರಿನಲ್ಲಿ ನಡೆದಿದೆ.
ಮದುರೈ ಮೂಲದ ಅಲಗರಾಜ್ (31 ವರ್ಷದ) ಕೊಲೆಯಾದ ದುರ್ದೈವಿ.
ಬಳ್ಳೂರಿನ ಶರಾವತಿ ಬಾರ್ಸಮೀಪ ಅರೆ ನಗ್ನ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಕಂಡು ಬಂದಿದ್ದು ಬಾಟಲ್, ಚಿಂದಿ ಆಯುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೃತ್ತಿಯಲ್ಲಿ ತುಪ್ಪದ ವ್ಯಾಪಾರಿಯಾಗಿರುವ ಅಲಗರಾಜ್ ಟಿವಿಎಸ್ ಬೈಕ್ನಲ್ಲಿ ತುಪ್ಪದ ಟಿನ್ಗಳನ್ನು ತಂದು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ ಕೊಲೆಯಾದ ಸ್ಥಳದಲ್ಲೂ ತುಪ್ಪದ ಟಿನ್ ಮತ್ತು ಬೈಕ್ ಕಂಡು ಬಂದಿದೆ.
ತಲೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿರುವುದು ಗೋಚರವಾಗಿದೆ. ಹಳೆ ವೈಷಮ್ಯ ಹಿನ್ನೆಲೆ ಕೊಲೆ ನಡೆದಿರ ಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಶ್ವಾನ ದಳ ವಿಧಿವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಕೀಲನ ಮೇಲೆ ಹಲ್ಲೆ ಮಾಡಿದ್ದ ಆರೋಪಿಯ ಪತ್ನಿ ಬಂಧನ
ಆನೇಕಲ್: ಹೊಸೂರು ಸಮೀಪ ಕೋರ್ಟ್ ಆವರಣದಲ್ಲೇ ವಕೀಲರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಲ್ಲೆ ಮಾಡಿದ್ದ ಆರೋಪಿ ಆನಂದ್ ಬಂಧನ ಜೊತೆಗೆ ಆತನ ಪತ್ನಿ ಸತ್ಯವತಿಯನ್ನೂ ಸಹ ಹೊಸೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಗರದ ಹೊರ ವಲಯದ ಹೊಸೂರು ಸಮೀಪ ಬುಧವಾರ ಹಾಡುಹಗಲೇ ಕೋರ್ಟ್ ಆವರಣದಲ್ಲಿ ವಕೀಲ ಕಣ್ಣನ್ ಅವರ ಮೇಲೆ ಆರೋಪಿ ಕೋರ್ಟ್ ಸಹಾಯಕ ಆನಂದ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
ಈ ಘಟನೆಯನ್ನು ಟಿವಿಯಲ್ಲಿ ನೋಡಿದ ಆರೋಪಿ ಪತ್ನಿ ಸತ್ಯವತಿ ಅವರು ಸಂಜೆ ವೇಳೆ ಕೋರ್ಟ್ ಆವರಣಕ್ಕೆ ಬಂದು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆ ವೇಳೆ ಪೊಲೀಸರು ಆಕೆಯನ್ನೂ ಬಂಧಿಸಿದ್ದಾರೆ. ಎಂದು ತಿಳಿದು ಬಂದಿದೆ.
ಸತ್ಯವತಿ ಹಾಗೂ ಆನಂದ್ ದಂಪತಿಗಳಿಗೆ ಒಂದು ಮಗು ಇದೆ. ಹಲ್ಲೆಗೊಳಗಾದ ವಕೀಲ ಕಣ್ಣನ್ ಅವರು ಅವಿವಾಹಿತ ಎಂದು ತಿಳಿದು ಬಂದಿದೆ.