daily story; ಒಂದು ಕಾಡಿನಲ್ಲಿ ನರಿಯೊಂದು ಆಹಾರವನ್ನು ಅರಸುತ್ತ ಕಾಡಿನ ಹೊರ ವಲಯಕ್ಕೆ ಬಂದಿತು. ಅನತಿ ದೂರದಲ್ಲಿ ಒಂದು ಗುಡಿಸಲನ್ನು ಕಂಡಿತು. ಅಲ್ಲಿದ್ದ ಹುಂಜವು ಕಾಳುಗಳನ್ನ ಹೆಕ್ಕಿ ತಿನ್ನುತ್ತಿರುವುದನ್ನ ಕಂಡು ಜೊಲ್ಲು ಸುರಿಸಿತು.
ಹೇಗಾದರೂ ಮಾಡಿ ಅದನ್ನ ಕಬಳಿಸಬೇಕೆಂದು ನರಿ ಹೊಂಚು ಹಾಕತೊಡಗಿತು. ತಕ್ಷಣವೇ ಅದು ಹೆಜ್ಜೆ ಹಾಕುತ್ತ ಹುಂಜದ ಬಳಿ ಬಂದಿತು. ಹುಂಜವು ನರಿಯನ್ನು ಕಂಡು ಕೂಡಲೇ ಒಂದು ಮರವನ್ನು ಏರಿ ಕುಳಿತಿತು. ನರಿಯು ಅದನ್ನು ಹಿಂಬಾಲಿಸಿ ಮರದ ಹತ್ತಿರವೇ ಬಂದಿತು.
‘ಆಹಾ ಗೆಳೆಯಾ! ನನ್ನನ್ನ ಕಂಡರೆ ಅದೆಷ್ಟು ಭಯ, ಗೌರವ ನಿನಗೆ! ಆದರೆ ನಾನಿರುವ ಕಾಡಿನಲ್ಲಿ ಪ್ರಾಣಿಗಳಿಗೆ ಅದಾವುದೂ ತಿಳಿಯದು. ಹಾಗಾಗಿ ಅವುಗಳ ವರ್ತನೆಗೆ ಬೇಸತ್ತು ಇಲ್ಲಿಗೆ ಬಂದಿರುವೆನು. ಈಗ ನಿನ್ನ ಸ್ನೇಹ ಬೇಕಾಗಿದೆ. ಬೇಗ ಕೆಳಗೆ ಇಳಿದು ಬಾ. ಒಮ್ಮೆ ನಮ್ಮ ಕಾಡನ್ನು ಸುತ್ತಿಕೊಂಡು ಬರೋಣ, ಕಾಡಿನ ಪ್ರಾಣಿಗಳು ನಮ್ಮನ್ನು ಕಂಡು ಹೊಟ್ಟೆಕಿಚ್ಚು ಪಡಬೇಕು’ ಎಂದು ನರಿ ಕಪಟದ ಮೃದುನುಡಿಗಳನ್ನಾಡಿತು.
ಹುಂಜ ‘ಗೆಳೆಯಾ, ನನ್ನ ಸ್ನೇಹವನ್ನು ಬಯಸಿ ಬಂದ ನಿನಗೆ ತಂಬಾ ಧನ್ಯವಾದಗಳು. ನನಗಿಲ್ಲಿ ಅನೇಕ ಸ್ನೇಹಿತರಿದ್ದಾರೆ. ಅವರನ್ನ ಅಗಲಿ ನಿನ್ನೊಂದಿಗೆ ಎಂದಿಗೂ ಬರಲಾರೆ’ ಎಂದು ನರಿಯ ಸ್ನೇಹವನ್ನು ನಿರಾಕರಿಸಿತು. ನರಿಯು ನಿರಾಶೆಯಿಂದ ಹಿಂದಿರುಗಿತು. ಮರುದಿನವೂ ನರಿ ಮತ್ತೆ ಅಲ್ಲಿಗೆ ಬಂದಿತು. ಈ ಸಲವೂ ಹುಂಜವು ನರಿಯನ್ನು ಕಂಡ ಕೂಡಲೇ ಅದೇ ಮರವನ್ನು ಏರಿ ಕುಳಿತಿತು.
ನರಿ, ‘ಗೆಳೆಯಾ, ನಿನ್ನ ಸ್ನೇಹವನ್ನು ಸಂಪಾದಿಸಲಾಗದ ನಾನು ಇದುವರೆಗೂ ಏನನ್ನೂ ಸೇವಿಸಿಲ್ಲ. ಆಹಾರವಿಲ್ಲದೆ ಶಕ್ತಿಯು ಕ್ಷೀಣಿಸುತ್ತಾ ಇದೆ. ಅಲ್ಲದೆ ಹೆಚ್ಚು ದಿನಗಳು ನಾನು ಜೀವಿಸುವುದಿಲ್ಲ. ಈಗ ಸಾವಿನ ಗಳಿಗೆಗಳು ಸಮೀಪಿಸುತ್ತಿವೆ. ನಾನು ಅಸು ನೀಗುವ ಪೂರ್ವದಲ್ಲಿ ನಿನ್ನ ಸ್ನೇಹವನ್ನು ಸಮ್ಮತಿಸು. ಸಂತಸದಿಂದ ನಿನ್ನ ಮಡಿಲಿನಲ್ಲಿಯೇ ನನ್ನ ಪ್ರಾಣ ಬಿಡುವೆ. ಈ ಕ್ಷಣವೇ ಕೆಳಗೆ ಇಳಿದು ಬಾ’ ಎಂದು ಹೇಳುತ್ತ ದೊಪ್ಪನ ಬಿದ್ದು ಸಾಯುತ್ತಿರುವಂತೆ ನಾಟಕವಾಡಿತು.
ಕೂಡಲೇ ಹುಂಜವು, ‘ಗೆಳೆಯಾ ನೀನು ಇಲ್ಲಿ ಸಾಯಬೇಡ, ನನ್ನ ಸ್ನೇಹಿತರು ನಿನ್ನ ಸಾವಿನ ಸುದ್ದಿ ತಿಳಿದು ಇಲ್ಲಿಗೆ ಬಂದರೆ ನಿನ್ನನ್ನ ಹರಿದು ಹಂಚಿ ತಿಂದು ಬಿಡಬಹುದು! ನೀನು ಈಗಲೇ ಹೋಗಿ ನಿನ್ನ ಕಾಡಿನಲ್ಲಿಯೇ ಜೀವ ಬಿಡುವುದು ವಾಸಿ’ ಎಂದು ಹೇಳಿತು.
ನರಿಯು ಈಗ ಹುಂಜದ ನುಡಿಗಳಿಗೆ ಬೆರಗಾಗಿ ಎಚ್ಚೆತ್ತುಕೊಂಡು, ‘ನಿನ್ನ ಸ್ನೇಹಿತರು ಅಷ್ಟೊಂದು ಕ್ರೂರವಾಗಿದ್ದಾರೆಯೇ? ನಾನು ನಿನಗೋಸ್ಕರವೇ ಪ್ರಾಣ ಬಿಡುತ್ತಿರುವ ವಿಷಯ ಅವರಿಗೂ ಸ್ವಲ್ಪ ತಿಳಿಯಲಿ. ಅವರು ನನ್ನನ್ನು ತಿಂದರೂ ಚಿಂತೆಯಿಲ್ಲ. ಈಗಲಾದರೂ ಕೆಳಗೆ ಇಳಿದು ಬಂದು ನನ್ನ ಸಾವಿನ ಸುದ್ದಿಯನ್ನು ತಿಳಿಸಿ ಅವರನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದು ನರಳುತ್ತ ಹೇಳಿತು.
ಈಗ ಹುಂಜವು ನರಿಗೆ ಕಾಣಿಸದಂತೆ ಮಲ್ಲನೆ ಇಳಿದು ಹೋಯಿತು. ಸ್ವಲ್ಪ ಹೊತ್ತಿನ ಬಳಿಕ ನರಿಯು ನಾಯಿಗಳ ಬೊಗಳುವಿಕೆಯನ್ನು ಕೇಳಿ ಬೆಚ್ಚಿತು.
ಎದ್ದು ನೋಡಿದಾಗ ಹುಂಜದ ಜೊತೆಗೆ ನಾಯಿಗಳು ಬರುತ್ತಿರುವುದು ಕಂಡಿತು. ಕೂಡಲೇ ನರಿಯು ಹುಂಜದ ಮೇಲಿನ ಆಸೆಯನ್ನು ಬಿಟ್ಟು ಕಾಲಿಗೆ ಬುದ್ದಿ ಹೇಳಿತು. ಮತ್ತೆಂದೂ ಅದು ಕಾಡಿನ ಹೊರವಲಯಕ್ಕೆ ಬರುವ ಪ್ರಯತ್ನವನ್ನು ಮಾಡಲಿಲ್ಲ.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)