ದೊಡ್ಡಬಳ್ಳಾಪುರ: ಕ್ಯಾನ್ಸರ್ಗೆ (cancer awareness) ಯಾವುದೇ ವಯಸ್ಸು, ಲಿಂಗಭೇದವಿಲ್ಲ. ಚಿಕ್ಕ ಮಕ್ಕಳಿಗೂ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಕ್ಯಾನ್ಸರ್ಗೆ ಗುಣಲಕ್ಷಣಗಳನ್ನು ಅರಿಯುವ ಮೂಲಕ ಆರಂಭದಲ್ಲಿಯೇ ತಪಾಸಣೆ ಮಾಡಿ, ಚಿಕಿತ್ಸೆ ಪಡೆದರೆ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ ಎಂದು ಶ್ರೀ ರಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಜಿ.ವಿಜಯಕುಮಾರ್ ತಿಳಿಸಿದರು.
ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಬಾಶೆಟ್ಟಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ, ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ಕ್ಯಾನ್ಸರ್ ಜಾಗೃತಿ ಕುರಿತು ಮಾತನಾಡಿದರು.
ಕ್ಯಾನ್ಸರ್ ಎಂದರೆ ಜೀವಕೋಶಗಳ ಅಸಹಜ ಬೆಳವಣಿಗೆ. ತಂಬಾಕು ಸೇವನೆ, ಬದಲಾಗುತ್ತಿರುವ ಜೀವನ ಶೈಲಿ, ಹಾರ್ಮೋನ್ಗಳ ವ್ಯತ್ಯಾಸವೂ ಕ್ಯಾನ್ಸರ್ಗೆ ಕಾರಣವಾಗಬಹುದು. ಕ್ಯಾನ್ಸರ್ ಭಯಾನಕ ರೋಗವಲ್ಲ. ಇದರ ಬಗ್ಗೆ ಭಯಬೀಳಬೇಕಾದ ಅಗತ್ಯವಿಲ್ಲ. ದೇಹದ ಯಾವುದೇ ಅಂಗಕ್ಕೂ ಕ್ಯಾನ್ಸರ್ ಹರಡಬಹುದು. 100ಕ್ಕೂ ಹೆಚ್ಚುಬಗೆಯ ಕ್ಯಾನ್ಸರ್ಗಳಿವೆ. ಹೆಚ್ಚಾಗಿ ಕರುಳು, ಸ್ಥನ, ರಕ್ತ, ಮೂಳೆ ಕ್ಯಾನ್ಸರ್ಗಳು ಕಾಣಿಸಿಕೊಳ್ಳುತ್ತವೆ.
ಅನೇಕ ಕುಟುಂಬಗಳಲ್ಲಿ ಕೆಲವರಾದರೂ ಕ್ಯಾನ್ಸರ್ ರೋಗಿಗಳಿದ್ದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ.
ಧೂಮಪಾನ, ತಂಬಾಕು ಸೇವನೆ,ಮದ್ಯಸೇವನೆ, ಬೊಜ್ಜು, ಅನಿಯಮಿತ ಆಹಾರ ಸೇವನೆಗಳು ಕ್ಯಾನ್ಸರ್ಗೆ ಕಾರಣವಾಗಬಹುದು. ಆದರೆ ಬಹಳಷ್ಟು ಮಂದಿ ಕ್ಯಾನ್ಸರ್ ರೋಗವನ್ನು ಆರಂಭದಲ್ಲಿ ನಿರ್ಲಕ್ಷ್ಯ ಮಾಡುವ ಪರಿಣಾಮ, ಅದು ಉಲ್ಬಣಗೊಳ್ಳುತ್ತದೆ. ಅಂತಿಮ ಹಂತ ತಲುಪಿದಾಗ ವೈದ್ಯರು ಸಹ ಏನೂ ಮಾಡಲಾಗುವುದಿಲ್ಲ ಎಂದರು.
ಗಡ್ಡೆ ನಿರ್ಲಕ್ಷ್ಯ ಬೇಡ
ದೇಹದಲ್ಲಿ ಯಾವುದೇ ಸಣ್ಣ ಗಡ್ಡೆಯಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಬಾರದು. ಅದು ಕ್ಯಾನ್ಸರ್ ಗಡ್ಡೆಯಾಗಿರಬಹುದು. ತಕ್ಷಣವೇ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು. ಮಹಿಳೆಯರಿಗೆ ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಹಂತಗಳನ್ನು ಮೀರಿದರೆ ಉಲ್ಬಣಗೊಂಡು ಜೀವಕ್ಕೆ ಅಪಾಯವಾಗುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅರಿವಿನ ಕೊರತೆಯಾಗಿದ್ದು, ಇಂದಿಗೂ ಆರೋಗ್ಯದ ಬಗ್ಗೆ ಹಲವಾರು ತಪ್ಪು ಕಲ್ಪನೆಗಳಿವೆ. ಈ ದಿಸೆಯಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕಾದ ಅಗತ್ಯವಿದೆ ಎಂದರು.
ಆಹಾರದಲ್ಲಿ ಜಾಗ್ರತೆಯಿರಲಿ
ಮಕ್ಕಳು ಜಂಖ್ ಫುಡ್ ಹೆಚ್ಚಾಗಿ ಸೇವಿಸುವುದರಿಂದ ಇದರಲ್ಲಿ ಕೃತಕ ಬಣ್ಣ, ರುಚಿಗಾಗಿ ಬಳಸುವ ಪದಾರ್ಥಗಳು ಕ್ಯಾನ್ಸರ್ಗೆ ಕಾರಣವಾಗಬಹುದು. ಈ ಕಾರಣದಿಂದಲೇ ರಾಜ್ಯದಲ್ಲಿ ಗೋಬಿ ಮಂಚೂರಿ ಮೊದಲಾದ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಲಾಗಿದೆ.
ಎಣ್ಣೆ, ಹೆಚ್ಚಿನ ಜಿಡ್ಡಿನ ಪದಾರ್ಥಗಳು ಕಡಿಮೆ ಮಾಡಬೇಕು. ರಾಗಿ, ತರಕಾರಿ, ಸಿರಿಧಾನ್ಯ, ಸೊಪ್ಪು ಮೊದಲಾದ ಆಹಾರವನ್ನು ಹೆಚ್ಚಾಗಿ ಸೇವಿಸಬೇಕು ಎಂದರು.
ಗುಣಲಕ್ಷಣಗಳು ಹಾಗೂ ಚಿಕಿತ್ಸೆ
ದೇಹದಲ್ಲಿ ಸಣ್ಣ ಗಡ್ಡೆ, ಮಚ್ಚೆ ಅಗಲವಾಗುತ್ತಿರುವುದು, ಕೆಮ್ಮು, ಮೂಗು, ಕಿವಿ, ಮೂತ್ರ ಮಲ ವಿಸರ್ಜನೆ ವೇಳೆ ಯಲ್ಲಿ ರಕ್ತ ಸ್ರಾವ, ಮೂತ್ರದಲ್ಲಿ ರಕ್ತ ಹೋಗುವುದು, ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ವ್ಯತ್ಯಾಸಗಳಾಗುವುದು, ತೂಕ ಕಡಿಮೆಯಾಗುವುದು ಇವು ಕ್ಯಾನ್ಸರ್ನ ಮುನ್ಸೂಚನೆಗಳಾಗಿವೆ. ಕ್ಯಾನ್ಸರ್ಗೆ ಈಗ ಆಧುನಿಕ ಚಿಕಿತ್ಸೆಗಳಿದ್ದು, ಕಿಮೋಥರಫಿ ಎಲ್ಲರಿಗೂ ತಿಳಿದ ಚಿಕಿತ್ಸೆಯಾಗಿದೆ. ಈಗ ಬಂದಿರುವ ಇಮ್ಯುನೋ ಥರಫಿ ಕ್ಯಾನ್ಸರ್ಕಾರಕ ಕಣಗಳನ್ನು ನಾಶಪಡಿಸುತ್ತದೆ ಆದರೆ ೪ನೇ ಹಂತ ದಾಟಿದ್ದರೆ ಗುಣಪಡಿಸುವುದು ಕಷ್ಟಸಾಧ್ಯ ಎಂದರು.
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದ ಪತ್ರಕರ್ತ ಡಿ.ಶ್ರೀಕಾಂತ, ವಿದ್ಯಾರ್ಥಿಗಳು ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಸಾಮಾನ್ಯ ಜ್ಞಾನ ಹೆಚ್ಚಾಗುವುದರೊಂದಿಗೆ, ಭಾಷೆಯ ಮೇಲೆ ಪ್ರಭುತ್ವವಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುತ್ತದೆ ಎಂದರು.