Do not help the ungrateful; ಹಿಮಾಲಯದ ಕೆಳಗಿನ ಕಾಡುಗಳಲ್ಲಿ ಒಂದು ಮರಕುಟಿಕ ವಾಸವಾಗಿತ್ತು. ಸಿಂಹವೊಂದು ಆ ಪ್ರದೇಶದಲ್ಲಿ ಆಹಾರ ಅರಸಿ ಬಂದಿತು. ಅಲ್ಲಿ ಬಿದ್ದಿದ್ದ ಯಾವುದೊ ಒಂದು ಮಾಂಸದ ತುಂಡನ್ನು ಅದು ತಿನ್ನತೊಡಗಿತು. ಹಾಗೆ ತಿನ್ನುವಾಗ ಒಂದು ಎಲುಬಿನ ತುಣುಕು ಸಿಂಹದ ಗಂಟಲಲ್ಲಿ ಸಿಕ್ಕಿಕೊಂಡಿದ್ದರಿಂದ ಸಿಂಹದ ಗಂಟಲು ಬಾತುಕೊಂಡು ನೋವು ಹೆಚ್ಚುತ್ತ ಹೋಯಿತು.
ಆ ದಾರಿಯಲ್ಲಿ ಹಾರುತ್ತಿದ್ದ ಮರಕುಟಿಕನಿಗೆ ಸಿಂಹದ ನರಳಾಟ ಕೇಳಿಸಿತು. ಸಿಂಹವನ್ನು ಕಂಡು ಸಿಂಹರಾಜ, ಏನು ಸಂಗತಿ?’ ಎಂದು ವಿಚಾರಿಸಿತು.
‘ಏನಿಲ್ಲ ನನ್ನ ಗಂಟಲಿನಲ್ಲಿ ಒಂದು ಎಲುಬಿನ ತುಂಡು ಸಿಕ್ಕಿಕೊಂಡಿದೆ’ ಎಂದಿತು ಸಿಂಹ ಬಿರುಸು ಧ್ವನಿಯಲ್ಲಿ.
“ಚಿಂತೆ ಬಿಡು, ನಾನು ತೆಗೆಯುವೆ, ಆದರೆ ತೆಗೆದ ಬಳಿಕ ನೀನು ನನ್ನನ್ನು ನುಂಗಿದರೆ…?’ ಎಂದಿತು, ಆ ಮರ ಕುಟಿಕ.
‘ಆ ಭಯವನ್ನು ಬಿಟ್ಟು ನನಗೆ ಉಪಕಾರ ಮಾಡು. ನನಗೋ ಸಹಿಸಲಾರದ ನೋವು. ನಿನ್ನನ್ನು ಖಂಡಿತವಾಗಿಯೂ ತಿನ್ನುವುದಿಲ್ಲ’ ಎಂದಿತು ಸಿಂಹ.
ಆದರೂ ಮರುಕುಟಿಕನಲ್ಲಿ ಅಳುಕಿತ್ತು. ಅದು ಸಿಂಹವನ್ನು ಮಲಗಲು ಹೇಳಿತು. ಒಂದು ಕೋಲನ್ನು ಹೆಕ್ಕಿ ತಂದು ಸಿಂಹದ ಬಾಯೊಳಗೆ ಅಡ್ಡ ಇಟ್ಟು, ಬಾಯಿ ಮುಚ್ಚದಂತೆ ಮಾಡಿ, ಗಂಟಲಿನಲ್ಲಿ ಸಿಕ್ಕಿಕೊಂಡಿದ್ದ ಎಲುಬನ್ನು ಹೊರಕ್ಕೆಳೆದು ತೆಗೆಯಿತು. ಆಗ ಸಿಂಹ ನೋವಿನಿಂದ ಪಾರಾಯಿತು.
ಅದೇ ಸಿಂಹ ಇನ್ನೊಂದು ದಿನ ಬೆಳಿಗ್ಗೆ ಇನ್ನೆಲ್ಲೋ ಮಾಂಸ ತಿನ್ನುತ್ತಿರುವುದನ್ನು ನೋಡಿದ ಮರಕುಟಿಕ ಸಿಂಹದ ನಿಜ ಸ್ವಭಾವವನ್ನು ತಿಳಿಯಲು ಅದೇ ಸರಿಯಾದ ಸಮಯ ಎಂದು ಯೋಚಿಸಿತು. ಹತ್ತಿರದ ಮರವೊಂದರ ಕೊಂಬೆಯ ಮೇಲೆ ಕುಳಿತು, ‘ಅರಣ್ಣ ರಾಜ, ಹಿಂದೊಮ್ಮೆ ನಿನಗೆ ಸಂಕಟ ಬಂದಾಗ, ಉಪಕಾರ ಮಾಡಿದ್ದೆ ನೆನಪಿದೆಯೇ? ಈಗ ನನಗೊಂದು ಸಹಾಯ ಮಾಡಬಲ್ಲೆಯಾ?’ ಎಂದು ಕೇಳಿತು.
‘ಯಾರು, ಮರಕುಟಿಕನೋ!’ ಎಂದು ಸಿಂಹ ಬಿರುಸಿನಿಂದ ಹೇಳಿತು. ‘ಆ ದಿನ ನನ್ನಂತಹ ಕ್ರೂರ ಮೃಗದ ಬಾಯಿಂದ ನೀನು ಪಾರಾದೆಯಲ್ಲ! ಆ ಉಪಕಾರವನ್ನು ನೀನು ನೆನೆಯಬೇಕು. ಅದು ಬಿಟ್ಟು ಇನ್ನೂ ಸಹಾಯ ಬೇಡುತ್ತೀಯಲ್ಲ’ ಎಂದು ಕೇಳಿತು ಸಿಂಹ.
ಕೃತಘ್ನ ಸಿಂಹದ ಮಾತು ಕೇಳಿದ ಮರಕುಟಿಕ ಕೃತಘ್ನರಿಗೆ ಸಹಾಯ ಮಾಡಬಾರದು ಎಂದು ಅಲ್ಲಿಂದ ಹೊರಟು ಹೋಯಿತು.
ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)