ಚಿಕ್ಕಬಳ್ಳಾಪುರ Crime news: ಹಳೇ ವೈಷಮ್ಯದ ಹಿನ್ನೆಲೆ ಪತಿ-ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹಾಗೂ ಗಂಡ್ರಗಾನಹಳ್ಳಿ ಮಧ್ಯ ಇರುವ ದುಗ್ಗನಾರೆಪಲ್ಲಿ ಗ್ರಾಮದ ಬಳಿ ನಡೆದಿದೆ.
ಹಲ್ಲೆಗೆ ಒಳಗಾದ ದಂಪತಿಯನ್ನ ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿ ಗಂಡ್ರಗಾನಹಳ್ಳಿ ಗ್ರಾಮದ ರೋಷನ್ ಬೇಗ್ ಹಾಗೂ ಆತನ ಪತ್ನಿ ಅಸ್ಮ ಸುಲ್ತಾನ ಎಂದು ಗುರುತಿಸಲಾಗಿದೆ.
ರೋಷನ್ ಬೇಗ್ ಸುಮಾರು ಎರಡು ವರ್ಷಗಳಿಂದ ಕಲ್ಪವೃಕ್ಷ ಖಾಸಗಿ ಬಸ್ ನಲ್ಲಿ ಡ್ರೈವರ್ ಕೆಲಸ ಮಾಡಿಕೊಂಡು ಬರುತ್ತಿದ್ದು. ಗಂಡ್ರಗಾನಹಳ್ಳಿ ಗ್ರಾಮದ ಸುರೇಶ್ ಹಾಗೂ ರೋಷನ್ ಬೇಗ್ ನಡುವೆ ಎರಡು ತಿಂಗಳ ಹಿಂದೆ ಈದ್ ಮಿಲಾದ್ ಹಬ್ಬದಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತಂತೆ. ನಂತರ ಸುರೇಶ್ ಪದೇ ಪದೇ ತನ್ನ ಗ್ಯಾಂಗ್ ನ್ನ ಕರೆದುಕೊಂಡು ಹೋಗಿ ರೋಷನ್ ಬೇಗ್ ಗೆ ಗುರಾಯಿಸುವುದು ರೇಗಿಸುವುದು ಮಾಡುತ್ತಿದ್ದ ಎನ್ನಲಾಗಿದೆ.
ಡ್ರೈವರ್ ಕೆಲಸ ಮುಗಿಸಿ ಮನೆ ಕಡೆ ರೋಷನ್ ಬೇಗ್ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸುರೇಶ್ ಹಿಂಬಾಲಿಸಿ ಚಾಕುವಿನಿಂದ ಹೊಟ್ಟೆಗೆ ಇರಿದು ಮರಣಾಂತಿಕ ಹಲ್ಲೆ ನಡೆಸಿದ್ದಾನೆ, ಇನ್ನೂ ಸ್ಥಳಕ್ಕೆ ಬಂದ ರೋಶನ್ ಬೇಗ್ ಪತ್ನಿ ಅಸ್ಮ ಸುಲ್ತಾನ ಅವರ ಮೇಲೆಯೂ ಸಹ ಹಲ್ಲೆ ನಡೆಸಿದ್ದಾನಂತೆ.
ಘಟನೆಯಲ್ಲಿ ಗಂಭಿರವಾಗಿ ಗಾಯಗೊಂಡ ದಂಪತಿಯನ್ನ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ಸಂಬಂದ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.