ದೊಡ್ಡಬಳ್ಳಾಪುರ: ವಸತಿ ಹಾಗೂ ವಕ್ ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(HDK) ಅವರ ವರ್ಣ ಕುರಿತು ಹೇಳಿರುವ ಮಾತು ಹಾಗೂ ಮುಸ್ಲಿಂ ಸಮುದಾಯದಿಂದ ಹಣ ಸಂಗ್ರಹಿಸಿ ಗೌಡರ ಕುಟುಂಬವನ್ನು ಖರೀದಿಸುವುದಾಗಿ ನೀಡಿರುವ ಹೇಳಿಕೆ ಖಂಡಿಸಿ ಜೆಡಿಎಸ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರ ನೇತೃತ್ವದಲ್ಲಿ ನ.20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ವಕ್ತಾರ ಕುಂಟನಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಚನ್ನಪಟ್ಟಣ ಉಪಚುನಾವಣೆಯ ಪೂರ್ವದಲ್ಲಿ, ಜಮೀರ್ ಅವರು ಕುಮಾರಸ್ವಾಮಿಯನ್ನು ಕಾಲ ಕುಮಾರಸ್ವಾಮಿ ಎಂದು ಸಂಬೋಧಿಸಿದ್ದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಚಾಮರಾಜಪೇಟೆಗೆ ಹೋಗಿ ರ್ಯಾಲಿ ಮಾಡಿ, ಸೀಮೆ ಎಣ್ಣೆ ಡಬ್ಬಿಯನ್ನು ಹೊತ್ತು ಮನೆ ಮನೆಗೆ ತೆರಳಿ ಜಮೀರ್ ಅಹಮದ್ ಅವರನ್ನು ಗೆಲ್ಲಿಸಿ ಅವರಿಗೆ ಜೀವನ ನೀಡಿದ್ದರು. ಅದೇ ಜಮೀರ್ ಅಹ್ಮದ್ ಈಗ ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇವೆ ಎಂದು ಹೇಳಿದ್ದಾರೆ.
ದೇಶದ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ನೀರು ಹಂಚಿಕೆಗಾಗಿ ಶ್ರಮಿಸಿದರು. ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರು. ಅಂತಹವರನ್ನು ಖರೀದಿಸುತ್ತೇನೆ ಎಂದು ಜಮೀರ್ ಹೇಳುತ್ತಾರೆ. ಇದು ಒಕ್ಕಲಿಗರನ್ನು ಖರೀದಿಸುತ್ತೇವೆಂದು ಅರ್ಥವೇ ಅಥವಾ ಹಿಂದೂಗಳನ್ನು ಖರೀದಿಸುತ್ತೇವೆಂದು ಅರ್ಥವೇ ಎಂದು ಪ್ರಶ್ನೆ ಮಾಡಿದರು.
ನಾವು ಮಣ್ಣಿನ ಮಕ್ಕಳಾಗಿದ್ದು, ಇದೇ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ಚುನಾವಣೆ ನಡೆಯುವ ಸಮಯದ ಕಾಂಗ್ರೆಸ್ ಸಚಿವರು ಖರೀದಿ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ನ.20ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದರು.
ಸಚಿವ ಜಮೀರ್ ಅಹಮದ್ ಹೇಳಿಕೆ ಖಂಡಿಸಿ ನ.20ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಯಲಿರುವ ಪ್ರತಿಭಟನೆಗೆ ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಜಿಲ್ಲೆಯ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ವಕ್ತಾರ ಕುಂಟನಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.