daily story: ಅನೇಕ ವರುಷಗಳ ಹಿಂದೆ ಕಾಡಿನ ಗುಹೆಯೊಂದರಲ್ಲಿ ‘ಮಂತ್ರವಾದಿಯೊಬ್ಬನಿದ್ದ. ಕ್ಷುದ್ರ ದೇವತೆಗಳ ಪೂಜಿಸಿ ಆ ದೇವತೆಗಳಿಂದ ‘ಮಂತ್ರ ದಂಡ’ವೊಂದನ್ನು ಪಡೆದಿದ್ದ.
ಆ ಮಂತ್ರ ದಂಡದಿಂದ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭಯ ಹುಟ್ಟಿಸಿ ಅವರಿಂದ ಧನ-ಕನಕ, ದವಸ-ಧಾನ್ಯಗಳನ್ನು ಕಸಿದುಕೊಳ್ಳುತ್ತಿದ್ದ. ವಿರೋಧಿಸಿದವರನ್ನು ಮಂತ್ರದಂಡದಿಂದ ಸುಟ್ಟು ಭಸ್ಮ ಮಾಡುತ್ತಿದ್ದ.
ಒಮ್ಮೆ ಆ ಕಾಡಿನ ಮಾರ್ಗವಾಗಿ ಸಂತರೊಬ್ಬರು ಶಿಷ್ಯರ ಸಮೇತ ಯಾತ್ರೆ ಹೊರಟಿದ್ದರು. ಇವರನ್ನು ಕಂಡ ಮಂತ್ರವಾದಿಯ ಶಿಷ್ಯರು ಇವರಲ್ಲಿ ಬೆಲೆಬಾಳುವ ಸಂಪತ್ತು ಇರಬಹುದು ಎಂದುಕೊಂಡು ಅವರೆಲ್ಲರನ್ನೂ ಸೆರೆಹಿಡಿದು ಮಂತ್ರವಾದಿಯ ಬಳಿ ಕರೆತಂದರು.
ಅವರನ್ನು ದುರುಗುಟ್ಟಿ ನೋಡಿದ ಮಂತ್ರವಾದಿ, ‘ನಿಮ್ಮಲ್ಲಿರುವ ಸಿರಿ ಸಂಪತ್ತನ್ನು ಬೇಗ ಕೊಟ್ಟುಬಿಡಿ. ಇಲ್ಲವಾದರೆ ಮಂತ್ರದಂಡದಿಂದ ನಿಮ್ಮನ್ನೆಲ್ಲಾ ಸುಟ್ಟು ಬೂದಿಮಾಡುವೆ’ ಎಂದು ಆರ್ಭಟಿಸಿದ.
ಸರ್ವಸಂಗ ತ್ಯಾಗಿಯಾದ ಸಂತರಲ್ಲಿ ಸಂಪತ್ತಾದರೂ ಎಲ್ಲಿಂದ ಬರಬೇಕು? ಶಾಂತವಾಗಿಯೇ ಸಂತರು ‘ನೀನು ಮಾಡುತ್ತಿರುವುದು ಅಕ್ಷಮ್ಮ ಅಪರಾಧ. ಕ್ಷುದ್ರ ದೇವತೆಗಳ ಶಕ್ತಿ ಶಾಶ್ವತವಲ್ಲ. ಸತ್ಯ, ನ್ಯಾಯ, ಧರ್ಮದಿಂದ ನಡೆಯುತ್ತಿರುವವರನ್ನು ನಿನ್ನ ಮಂತ್ರದಂಡ ಏನೂ ಮಾಡಲಾಗದು?’ ಎಂದಾಗ ಮಂತ್ರವಾದಿಗೆ ಅಸಾಧ್ಯವಾದ ಕೋಪ ಬಂತು.
ಮಂತ್ರದಂಡವನ್ನು ಮಂತ್ರಿಸಿ ‘ಈ ಸಂತ ಸುಟ್ಟು ಬೂದಿಯಾಗಲಿ’ ಎಂದು ಅರಚಿದ. ಆದರೆ ಸಂತರಿಗೆ ಏನೂ ಆಗಲಿಲ್ಲ. ನಗು ನಗುತ್ತಾ ಬಂದು ಆ ಮಂತ್ರದಂಡವನ್ನು ಮುಟ್ಟಿದ ತಕ್ಷಣ ಅದು ಸುಟ್ಟುಬೂದಿಯಾಯಿತು.
ಮಂತ್ರವಾದಿಯಲ್ಲಿದ್ದ ಗರ್ವ ಸರನೆ ಇಳಿಯಿತು. ಮುನಿಯ ಪಾದಕ್ಕೆರಗಿ ‘ನನ್ನನ್ನು ಕ್ಷಮಿಸಿ ಮಹಾತ್ಮರೆ! ಅಹಂಕಾರದಿಂದ ಮದವೇರಿದ ನನಗೆ ಸತ್ಯದ ಬೆಳಕು ತೋರಿದಿರಿ. ಮೃಗದಂತೆ ಬಾಳುತ್ತಿದ್ದವನನ್ನು ಮಾನವನನ್ನಾಗಿ ಮಾಡಿದಿರಿ’ ಎಂದು ಶರಣಾದ.
ಈ ಪರಿವರ್ತನೆ ಕಂಡು ಮುನಿಗೆ ಮಹದಾನಂದವಾಯಿತು. ಶುಭಾಶೀರ್ವಾದ ಮಾಡಿ ಯಾತ್ರೆ ಮುಂದುವರಿಸಿದರು.
ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಿಲ್ಲ)