daily story: ಮರ ಕಡಿದು ಮಾರಾಟ ಮಾಡಿ ಬದುಕನ್ನು ಸಾಗಿಸುತ್ತಿದ್ದ ರಾಮು. ಪ್ರತಿ ದಿನವೂ ಕಾಡಿಗೆ ಹೋಗಿ ಮರ ಕಡಿದು ಎಷ್ಟು ಸಾಧ್ಯವೋ ಅಷ್ಟನ್ನು ಹೊತ್ತು ನಡೆದು ಪೇಟೆಯಲ್ಲೆಲ್ಲ ಮಾರಾಟ ಮಾಡುತ್ತಿದ್ದನು. ಬಂದ ಹಣದಿಂದ ಸುಖವಾದ ಜೀವನ ನಡೆಸುತ್ತಿದ್ದನು.
ನಿತ್ಯದಂತೆ ಅಂದೂ ಕಾಡಿಗೆ ಹೋಗಿ ಮರ ಕಡಿದು ಕಟ್ಟಿಗೆ ಮಾಡಿ ತಲೆಯಲ್ಲಿ ಹೊತ್ತುಕೊಂಡು ಬೀದಿಬೀದಿಗಳಲ್ಲೂ ಸುತ್ತಾಡಿದ. ಅಂದು ಯಾರೂ ಕಟ್ಟಿಗೆಯನ್ನು ಕೊಳ್ಳಲಿಲ್ಲ. ಹಸಿವಿನಿಂದ ಅವನು ಕಂಗಾಲಾದನು. ನಡೆಯುವುದೇ ಕಷ್ಟವೆಂಬ ಸ್ಥಿತಿ ಬಂದಿತು.
ಈ ಕಟ್ಟಿಗೆ ಮಾರಾಟವಾಗದಿದ್ದರೂ ಚಿಂತೆ ಇಲ್ಲ. ಇವನ್ನು ಅರಸನಿಗೆ ಕಾಣಿಕೆಯಾಗಿ ಒಪ್ಪಿಸಬೇಕು ಎಂದು ವಿಚಾರಿಸಿ ನಿಧಾನವಾಗಿ ಅರಮನೆಯತ್ತ ಹೆಜ್ಜೆ ಹಾಕಿದನು. ಅವನು ಅರಮನೆ ತಲುಪುವಷ್ಟರಲ್ಲಿಯೇ ರಾತ್ರಿಯಾಗಿತ್ತು. ಆದ್ದರಿಂದ ಅರಮನೆಯ ಬಾಗಿಲು ಮುಚ್ಚಿಕೊಂಡಿತ್ತು. ಇನ್ನೇನು ಮಾಡುವುದು? ಒಂದಡಿ ಮುಂದಿಡುವುದೂ ಅಸಾಧ್ಯವಾಗಿತ್ತು. ಕಟ್ಟಿಗೆಯನ್ನು ಕೆಳಗಿಳಿಸಿಟ್ಟು ರಾಮು ಅರಮನೆಯ ಬಾಗಿಲು ಬಳಿಯಲ್ಲಿ ಮಲಗಿದನು. ಹಸಿವು, ನೀರಡಿಕೆ, ದಣಿವಿನಿಂದಾಗಿ ಮಲಗಿದ ಕೂಡಲೇ ನಿದ್ದೆ ಆವರಿಸಿತು.
ಆ ರಾಜ್ಯದ ಮಹಾರಾಜನಾದ ಉದಯವರ್ಮ ಮುದುಕನಾಗಿದ್ದನು. ಆತನಿಗೆ ಮಕ್ಕಳೇ ಇರಲಿಲ್ಲ. ತನ್ನ ಕಾಲಾನಂತರ ರಾಜ್ಯಭಾರವನ್ನು ಯಾರ ಕೈಗೆ ಒಪ್ಪಿಸಬೇಕೆಂಬ ಆಲೋಚನೆಯಲ್ಲಿ ಮುಳುಗಿ ಆತ ದಿನೇದಿನೇ ಸೊರಗುತ್ತಿದ್ದನು.
ಅಂದು ರಾತ್ರಿ ನಿದ್ರೆಯಲ್ಲಿ ಉದಯವರ್ಮನಿಗೆ ಒಂದು ಶಕ್ತಿ ‘ಉದಯವರ್ಮ, ನಾಳೆ ಬೆಳಿಗ್ಗೆ ಅರಮನೆಯ ಬಾಗಿಲು ತೆರೆಯುವಾಗ ಮೊದಲು ಕಾಣುವ ವ್ಯಕ್ತಿಯನ್ನು ನೀನು ಮುಂದಿನ ಅರಸನನ್ನಾಗಿ ನೇಮಿಸು’ ಎಂದು ಹೇಳಿತು.
ಮಹಾರಾಜನಿಗೆ ಆ ಕ್ಷಣ ಎಚ್ಚರವಾಯಿತು. ಆ ಕೂಡಲೇ ಪ್ರಧಾನಮಂತ್ರಿಯನ್ನು ಕರೆದು ‘ನಾಳೆ ಬೆಳಿಗ್ಗೆ ನನ್ನ ಎದುರಿನಲ್ಲೇ ಅರಮನೆಯ ಬಾಗಿಲು ತೆರೆಯಬೇಕು’ ಎಂದು ಹೇಳಿದನು. ಪ್ರಧಾನಮಂತ್ರಿಗೆ ಅರ್ಥವಾಗಲಿಲ್ಲ. ಆದರೆ ರಾಜಾಜ್ಞೆಯಲ್ಲವೇ? ಹೇಳಿದಂತೆ ಕೇಳದಿರಲು ಸಾಧ್ಯವೇ?
ಹೊತ್ತು ಮೂಡಿತು. ಮಹಾರಾಜ ಹಾಗೂ ಮಂತ್ರಿಗಳ ಸಮ್ಮುಖದಲ್ಲಿ ಅರಮನೆಯ ಬಾಗಿಲನ್ನು ತೆರೆಯಲಾಯಿತು. ರಾಮು ಬಾಗಿಲು ತೆರೆಯುವುದನ್ನೇ ಕಾದು ಅಲ್ಲಿ ನಿಂತಿದ್ದನು. ಅರಸ ಓಡಿ ಹೋಗಿ ಅವನನ್ನು ಹಿಡಿದೆಬ್ಬಿಸಿ ‘ಇಂದಿನಿಂದ ನೀನು ಈ ರಾಜ್ಯದ ಅರಸ.
ಇಂದಿನಿಂದ ನೀನು ಕಟ್ಟಿಗೆ ಮಾರುವುದನ್ನು ಬಿಟ್ಟು ಬಿಡು’ ಎಂದು ಹೇಳಿದನು. ರಾಮುವಿಗೆ ಮೃಷ್ಟಾನ್ನ ಭೋಜನವನ್ನು ನೀಡಲಾಯಿತು. ನಂತರ ಸಿಂಹಾಸನದಲ್ಲಿ ಕೂರಿಸಿ ಬಂಗಾರದ ಕೀರಿಟವನ್ನು ತೊಡಿಸಲಾಯಿತು. ಅರಮನೆಯ ಆಸ್ಥಾನ ಪುರೋಹಿತನು ‘ತಾವೀಗ ಈ ರಾಜ್ಯದ ಮಹಾರಾಜರು, ಮಂತ್ರಿಗಳನ್ನು ಹಾಗೂ ಸಭೆಯ ಇತರರನ್ನು. ಈ ರಾಜ್ಯದ ಜನರನ್ನು ತಾವು ಹರಸಬೇಕು’ ಎಂದನು.
ಹೊಸ ಅರಸನು ಬಲಗೈ ಚಾಚಿ ಪ್ರಧಾನಮಂತ್ರಿಯನ್ನೂ, ಎಡಗೈ ಚಾಚಿ ಸೇನಾನಾಯಕನನ್ನೂ ಕರೆದ. ಅವರು ಬಳಿ ಬಂದು ನಿಂತಾಗ ‘ಈ ಸಿಂಹಾಸನದಿಂದ ಮೇಲೇಳಲು ನನಗೊಮ್ಮೆ ನೆರವಾಗಿರಿ’ ಎಂದನು. ಅವರಿಬ್ಬರೂ ತಮ್ಮ ಮನದಲ್ಲಿ ನಿನ್ನೆತನಕ ಕಟ್ಟಿಗೆ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದವನು ಇಂದು ಹೇಳುತ್ತಾನೆ.
ಕುಳಿತಲ್ಲಿಂದ ಮೇಲೆಳಲು ತನ್ನ ನೆರವಿಗೆ ಬನ್ನಿ ಅಂತ. ಅರಸನಾದ ಕೂಡಲೇ ಆತನಲ್ಲಿ ಹೇಗೆ ಮಾರ್ಪಾಟು ಬಂದುಬಿಟ್ಟಿತು ನೋಡಿ! ಇದೆಂತಹ ಅಹಂಕಾರ? ಎಂದುಕೊಳ್ಳುತ್ತಿದ್ದರು. ಅವರು ಯೋಚಿಸುತ್ತಿರುವುದೇನೆಂಬುದು ರಾಮುವಿಗೆ ಅರ್ಥವಾಯಿತು. ‘ನೀವು ಮನದಲ್ಲಿ ಅಂದುಕೊಳ್ಳುತ್ತಿರುವುದೇನೆಂಬುದನ್ನು ನಾನು ಊಹಿಸಿಕೊಳ್ಳಬಲ್ಲೆ. ನಿಮ್ಮ ಊಹೆ ನಿಜವು ಹೌದು. ಕಟ್ಟಿಗೆ ಎಷ್ಟೇ
ಭಾರವಿದ್ದರೂ ನನ್ನಿಂದ ಹೊತ್ತು ನಡೆಯುವುದು ಸಾಧ್ಯ. ಆದರೆ ಇದು ರಾಜ್ಯದ ಭಾರ. ಈ ರಾಜ್ಯದ ಜನರ ಭಾರ. ನಿಮ್ಮ ನೆರವಿಲ್ಲದೆ ಈ ಭಾರ ಹೊತ್ತು ನಡೆಯುವುದು ನನ್ನಿಂದ ಸಾಧ್ಯವಿಲ್ಲ’ ಎಂದನು ಹೊಸ ರಾಜ ಹೊಸ ಅರಸನ ಈ ಮಾತುಗಳನ್ನು ಕೇಳಿ ಎಲ್ಲರೂ ಸಂತೋಷಪಟ್ಟರು. ನಮಗೊಬ್ಬ ಜಾಣರಾಜ ದೊರೆತನೆಂದು ಹಿಗ್ಗಿದರು.
ಕೃಪೆ: ಸಾಮಾಜಿಕ ಜಾಲತಾಣ.