ಹುಬ್ಬಳ್ಳಿ: ರಾಜ್ಯ ಸಾರಿಗೆ (KSRTC) ಸಂಸ್ಥೆಗಳಲ್ಲಿ ಕಳೆದ ಏಕಕಾಲಕ್ಕೆ 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದ್ದು, ಈ ಪೈಕಿ 1 ಸಾವಿರ ಜನರನ್ನ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ಗೋಕುಲ ರಸ್ತೆಯ ಎಚ್‌ಡಿಬಿಆರ್‌ಟಿಎಸ್ ಘಟಕದಲ್ಲಿ ನಡೆದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 27ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಕಳೆದ 7 – 8 ವರ್ಷಗಳಿಂದ ಯಾವುದೇ ನೇಮಕಾತಿ ಪ್ರಕ್ರಿಯೆಗಳು ನಡೆದಲ್ಲ. ಹೀಗಾಗಿ ಈಗ ಏಕಕಾಲಕ್ಕೆ 9 ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದ್ದು,ಈ ಪೈಕಿ 1 ಸಾವಿರ ಜನರನ್ನ ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದರು.
ಅಪಘಾತ ರಹಿತ ಹಾಗೂ ಅಪರಾಧ ರಹಿತ ಕಾರ್ಯ ಸಾಧಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಿಸಲಾಗುತ್ತಿದೆ ಹಾಗೂ ಅಪಘಾತ ವಿಮಾ ಯೋಜನೆಯಡಿ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ರೂ.1 ಕೋಟಿ ವಿಮೆಯನ್ನು ವಿತರಣೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಉಚಿತ ಪ್ರಯಾಣ ನೀಡುವ ಮೂಲಕ ದಾಖಲೆ ಮಾಡಿದೆ. ಸರ್ಕಾರದ ಯಶಸ್ವಿ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ 127 ನೂತನ ಬಸ್‌ಗಳ ಲೋಕಾರ್ಪಣೆ, ಅಪಘಾತ /ಅಪರಾಧ ರಹಿತ ಸೇವೆ ಸಲ್ಲಿಸಿದ ಸಂಸ್ಥೆಯ ಚಾಲಕರಿಗೆ “ಬೆಳ್ಳಿ ಪದಕ” ವಿತರಣೆ. “ಸಾರಿಗೆ ಸಂಜೀವಿನಿ” ಯೋಜನೆಯಡಿ ಕಾರವಾರ/ಬೆಳಗಾವಿ/ಗದಗ ಸರ್ಕಾರಿ ವಿಜ್ಞಾನ ಸಂಸ್ಥೆಗಳೊಂದಿಗೆ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಗೆ ಚಾಲನೆ ನೀಡಲಾಯಿತು.
ಅಲ್ಲದೆ “ವಾಯವ್ಯ ಸಾರಿಗೆ ಸಂಪದ” ಡಿಜಿಟಲ್ ತ್ರೈಮಾಸಿಕ ಪತ್ರಿಕೆಯ ಬಿಡುಗಡೆ. ಮೃತಪಟ್ಟ ಸಂಸ್ಥೆಯ ನೌಕರರ ಅವಲಂಬಿತರಿಗೆ ನೌಕರರ ಕುಟುಂಬ ಕಲ್ಯಾಣ ನಿಧಿ ಯೋಜನೆಯ ರೂ 5 ಲಕ್ಷ ಮೊತ್ತದ ಚೆಕ್ ವಿತರಣೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸಂಸ್ಥೆಯಲ್ಲಿ ಮೃತಪಟ್ಟ ನೌಕರರ ಅವಲಂಬಿತರಿಗೆ ರೂ 50 ಲಕ್ಷದ ಮೊತ್ತದ ಅಪಘಾತ ವಿಮಾ ಯೋಜನೆಯ ಚೆಕ್ ವಿತರಣೆ. ನೌಕರರು ಭವಿಷ್ಯ ನಿಧಿ ಮುಂಗಡಕ್ಕೆ ಅರ್ಜಿ ಸಲ್ಲಿಸುವ ಮತ್ತು ವಾಣಿಜ್ಯ ಮಳಿಗೆಗಳ ಬಾಡಿಗೆ ಮೊತ್ತವನ್ನು UPI ಮೂಲಕ ಪಾವತಿಸುವ ತಂತ್ರಾಂಶಗಳ ಚಾಲನೆ.
ನೂತನ ಕಿರಿಯ ಸಹಾಯಕ ಮತ್ತು ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ಪತ್ರಗಳ ವಿತರಣೆ. 2024-25 ನೇ ಸಾಲಿನ ಅಂತರ ವಿಭಾಗೀಯ ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ ವಿಜೇತರಿಗೆ ಪಾರಿತೋಷಕ ವಿತರಣೆ.
2023-24 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ಶ್ರೀಮತಿ ದಿವ್ಯಪ್ರಭು ಜಿಆರ್‌ಜೆ, ಇಲಾಖೆಯ ಅಧಿಕಾರಿಗಳು, ಸಾರಿಗೆ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.