Site icon ಹರಿತಲೇಖನಿ

daily story| ಹರಿತಲೇಖನಿ ದಿನಕ್ಕೊಂದು ಕಥೆ: ಮರದ ಬೆಲೆ

daily story: ಒಂದು ಹಳ್ಳಿಯಲ್ಲಿ ಮುತ್ತು ಶೆಟ್ಟಿ ಎಂಬುವವನು ವ್ಯಾಪಾರಿಗಳ ‘ವಂಶದಲ್ಲಿ ಜನಿಸಿದ್ದ, ಬಾಲ್ಕದಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟದಿಂದ ಬೆಳೆದಿದ್ದ ಅವನಿಗೆ ಮನೆಯಲ್ಲಿ ಸಂಪತ್ತು ರಾಶಿ ಬಿದ್ದರೆ ಮಾತ್ರ ಸುಖವಾಗಿ ಬದುಕಬಹುದೆಂಬ ಭಾವನೆ ಬೆಳೆದಿತ್ತು.

ಸಂಪತ್ತು ಪ್ರಾಮಾಣಿಕನ ಬಳಿಗೆ ಬರುವುದು ನಿಧಾನ, ಧಾರಾವಾಗಿ ಬರಬೇಕೆಂದರೆ ಏನಾದ್ರೂ ಅಡ್ಡ ದಾರಿ ಹಿಡಿಯಬೇಕೆಂಬ ಕೆಟ್ಟ ಯೋಚನೆ ಅವನ ಮನಸ್ಸನ್ನು ಆವರಿಸಿತ್ತು.

ಮುತ್ತು ಶೆಟ್ಟಿಯ ಮನೆಯ ಬಳಿ ಸುಗಂಧ ಬೀರುವ ರತ್ನಗಂಧ ಎಂಬ ಮರಗಳಿದ್ದವು. ಅವನ ತಂದೆ ಅದರ ಗಿಡ ನೆಟ್ಟು ನೀರೆರೆದು ಆ ಮರವಾಗುವ ತನಕ ಬೆಳೆಸಿದ್ದ. ‘ಯಾವ ಕಾಲಕ್ಕೂ ಈ ಮರಗಳನ್ನು ಕಡಿದು ಮಾರಾಟ ಮಾಡಬಾರದು. ಇದರ ಹವೆ ಬಲು ದೂರದವರೆಗೂ ಗಾಳಿಯನ್ನು ಶುದ್ದೀಕರಿಸಿ ಒಳ್ಳೆಯ ಆರೋಗ್ಯ ನೀಡುತ್ತದೆ. ಈ ಅಮೂಲ್ಯ ವೃಕ್ಷ ಸಂತತಿ ಬೇಕೆಂದರೆ ಸುಲಭವಾಗಿ ಸಿಗುವುದಿಲ್ಲ’ ಎಂದು ಮಗನಿಗೆ ಕಿವಿಮಾತು ಹೇಳಿದ್ದ. ಹೀಗಾಗಿ ಮರಗಳು ವಿಶಾಲವಾಗಿ ಬೆಳೆದು ನೆರಳು ಕೊಡುತ್ತಿದ್ದವು.

ಹಗಲಿರುಳೂ ಕುಬೇರನಾಗುವ ಕನಸು ಕಾಣುತ್ತಿದ್ದ ಮುತ್ತು ಶೆಟ್ಟಿಯನ್ನು ಅವನ ಗೆಳೆಯರು ತಪ್ಪು ದಾರಿಗೆಳೆದರು. ‘ಅಂಗೈಯಲ್ಲಿ ಬೆಣ್ಣೆ ಇಡ್ಕೊಂಡು ಯಾರಾದರೂ ತುಪ್ಪ ಹುಡುಕುತ್ತಾರಾ? ದೊರೆಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅಂದು ಉಡುಗೊರೆ ನೀಡಿದವರಿಗೆಲ್ಲ ದೊರೆ ಬಂಗಾರದ ನಾಣ್ಯಗಳನ್ನು ಬಾಚಿ ಬಾಚಿ ಕೊಡುತ್ತಾರೆ. ರತ್ನಗಂಧ ವೃಕ್ಷಗಳನ್ನು ಸುಮ್ಮನೆ ಇಟ್ಟುಕೊಂಡರೆ ದುಡ್ಡು ಬರುವುದಿಲ್ಲ. ಮರಗಳನ್ನು ಕಡಿದು ಪೀಠೋಪಕರಣಗಳನ್ನು ಮಾಡಿಸಿ ದೊರೆಗೆ ಉಡುಗೊರೆ ನೀಡು, ಘಮಘಮ ಸುಗಂಧ ಬೀರುವ ಸಾಮಗ್ರಿಗಳನ್ನು ಕಂಡರೆ ದೊರೆಗೆ ಹರ್ಷವಾಗುತ್ತದೆ. ಮೂಟೆಗಟ್ಟಲೆ ಬಂಗಾರ ಕೊಡುತ್ತಾರೆ. ಅಪೂರ್ವವಾದ ಈ ವೃಕ್ಷಗಳ ಬೆಲೆ ದೊರೆಗಳಿಗೆ ಗೊತ್ತಿದೆ ಎಂದು ಕಿವಿಯೂದಿದರು.

ಬಂಗಾರ ಎನ್ನುವಾಗ ಶೆಟ್ಟಿಗೆ ನಾಲಗೆ ನೀರೂರಿತು. ‘ಆದರೆ ಈ ಮರಗಳನ್ನು ಕಡಿಯಬಾರದೆಂದು ಅಪ್ಪ ಹೇಳಿದ್ದಾರಲ್ಲ?’ ಎಂದು ಆತಂಕಗೊಂಡ, ಗೆಳೆಯರು ನಕ್ಕು ಬಿಟ್ಟರು. ‘ಬರುತ್ತಿರುವುದು ಬಂಗಾರದ ನಾಣ್ಯಗಳು ಅಪ್ಪ ಹೇಳಿದ್ದಾರೆಂದು ಸುಮ್ಮನೆ ಕುಳಿತರೆ ಬಡವನಾಗಿಯೇ ಉಳಿಯುತ್ತಿ’ ಎಂದು ಮೂದಲಿಸಿದರು.

ಶೆಟ್ಟಿ ಮರ ಕಡಿಯಲು ಮುಂದಾದಾಗ ಅವನ ತಾಯಿ ಅಡ್ಡ ಬಂದಳು.
ಅಮೂಲ್ಯವಾದ ವೃಕ್ಷ ಸಂತತಿಯನ್ನು ಅಳಿಸಬಾರದೆಂದು ಯಾಚಿಸಿದಳು. ಆದರೆ ಯಾರ ಮಾತಿಗೂ ಕಿವಿಗೊಡದ ಮುತ್ತು ಶೆಟ್ಟಿ ಮರಗಳನ್ನು ಕಡಿದುರುಳಿಸಿ ಪೀಠೋಪಕರಣಗಳನ್ನು ಸಿದ್ಧಗೊಳಿಸಿದ.
ಆ ಹೊತ್ತಿಗೆ ಶೆಟ್ಟಿಯ ಒಬ್ಬನೇ ಮಗನಿಗೆ ವಿಷದ ಹಾವು ಕಡಿಯಿತು.

ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಅವನನ್ನು ಪರೀಕ್ಷಿಸಿದ ವೈದ್ಯರು. ‘ರತ್ನಗಂಧ ಎಂಬ ಅಪರೂಪದ ಮರದ ತೊಗಟೆಯನ್ನು ತಂದರೆ ಅದರಿಂದ ಔಷಧ ತಯಾರಿಸಿ ಇವನನ್ನು ಬದುಕಿಸಬಹುದು. ಆದರೆ ಇಂತಹ ಅಮೂಲ್ಯ ಮದ್ದು ಸಿಗುವುದು ತೀರ ಅನುಮಾನ ಎಂದರು.
‘ಹೀಗೆಂದರೆ ಹೇಗೆ? ನನ್ನ ಮಗನನ್ನು ಏನಾದರೂ ಮಾಡಿ ಬದುಕಿಸಿ ಕೈತುಂಬ ಹೊನ್ನು ಕೊಡುತ್ತೇನೆ’ ಎಂದ ಶೆಟ್ಟಿ. ವೈದ್ಯರಿಗೆ ನಗು ಬಂತು.

ಗಿಡಗಳು ಮಾಡುವ ಕೆಲಸವನ್ನು ಹಣ ಮಾಡುವುದಿಲ್ಲಪ್ಪ ನನ್ನ ತೂಕದ ಬಂಗಾರ ಕೊಟ್ಟರೂ ಮೂಲಿಕೆಯಿಲ್ಲದೆ ವಿಷ ಇಳಿಯದು. ಹಣದಿಂದ ಪ್ರಾಣವನ್ನು ಕೊಂಡುಕೊಳ್ಳಲಾಗದು’ ಎಂದರು.
ಮುತ್ತು ಶೆಟ್ಟಿ ತಲೆ ಮೇಲೆ ಕೈಹೊತ್ತು ಕುಳಿತ. ಧನದಾಹದಿಂದ ತಾನು ಕಡಿದು ಹಾಕಿದ ಮರವಿರುತ್ತಿದ್ದರೆ ತನ್ನ ಮಗ ಬದುಕಬಹುದಿತ್ತು. ತಾನೆಂತಹ ತಪ್ಪು ಮಾಡಿದೆ! ಎಂದು ಅಳತೊಡಗಿದ.

ಆಗ ಅದೇ ಮರದಿಂದ ತಯಾರಿಸಿದ ಒಂದು ಮಂಚವು ಮನುಷ್ಯ ಭಾಷೆಯಲ್ಲಿ ಅವನನ್ನು ಕರೆಯಿತು. ‘ಅಯ್ಯಾ, ನಿನ್ನ ತಂದೆ ನಮ್ಮನ್ನು ನೆಟ್ಟು ನೀರೆರೆದು ಗೊಬ್ಬರ ಹಾಕಿ ಬೆಳೆಸಿದರು. ನಾವು ಮರಗಳು ನೆಟ್ಟವನ ಋಣ ತೀರಿಸದೆ ಬಿಡುವುದಿಲ್ಲ. ಅದಕ್ಕಾಗಿ ನಿನಗೊಂದು ಉಪಕಾರ ಮಾಡುತ್ತೇವೆ.

ನಮ್ಮ ತೊಗಟೆಯೂ ಸಿಗದಂತೆ ನೀನು ನಾಶ ಮಾಡಿರುವೆ. ಇದರ ಬದಲು ನಮ್ಮನ್ನು ಬೆಂಕಿಯಲ್ಲಿ ಸುಟ್ಟು ಅದರಿಂದ ಸಿಗುವ ಬೂದಿಯನ್ನು ನಿನ್ನ ಮಗನ ಮೈಗೆ ಲೇಪಿಸು ನೀರಿನಲ್ಲಿ ಕದಡಿ ಕುಡಿಸು. ಅವನು ವಿಷದ ಪ್ರಭಾವದಿಂದ ಮುಕ್ತನಾಗಿ ಬದುಕುತ್ತಾನೆ’ ಎಂದಿತು.

ಮುತ್ತು ಶೆಟ್ಟಿ ಹಾಗೆಯೇ ಮಾಡಿ ಮಗನ ಜೀವವುಳಿಸಿಕೊಂಡ. ಹಣದ ಆಶೆಗೆ ಸಸ್ಯಗಳ ಕುಲನಾಶ ಮಾಡಬಾರದು ಎಂಬ ನೀತಿಯನ್ನು ತಿಳಿದುಕೊಂಡು ತಾನೂ ತನ್ನ ತಂದೆಯಂತೆ ಆಮೂಲ್ಯ ಗಿಡಗಳನ್ನು ನೆಟ್ಟು ಬೆಳೆಸಿದ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

Exit mobile version