ದೊಡ್ಡಬಳ್ಳಾಪುರ: ಸಮನ್ವಯ ಶಿಕ್ಷಣ ಮಧ್ಯವರ್ತನ ಚಟುವಟಿಕೆ ಅಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಂತದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿಶೇಷ ಚೇತನ ವಿದ್ಯಾರ್ಥಿಗಳ ವೈದ್ಯಕೀಯ ಮೌಲ್ಯಂಕನ ಶಿಬಿರವನ್ನು ನಗರದ ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕಿನ 250ಕ್ಕೂ ಹೆಚ್ಚು ದಿವ್ಯಾಂಗರು ಭಾಗವಹಿಸಿದ್ದರು.
ಈ ವಿದ್ಯಾರ್ಥಿಗಳಿಗೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳು ಮತ್ತು Rbsk ತಂಡದ ವೈದ್ಯಾಧಿಕಾರಿಗಳು & ಅಲಿಂಕೋ ಸಂಸ್ಥೆಯ ಸಹಕಾರದೊಂದಿಗೆ ಆರು ವಿಭಾಗಗಳಲ್ಲಿ( ಶ್ರವಣ ದೃಷ್ಟಿ ದೈಹಿಕ, ಮಾನಸಿಕ, ಕಲಿಕಾ ದೌರ್ಬಲ್ಯ ) ತಪಾಸಣೆಯನ್ನು ಕೈಗೊಂಡು, ಅಗತ್ಯ ವೈದ್ಯಕೀಯ ಸಲಹೆ ಮತ್ತು ಸಾಧನ ಸಲಕರಣೆಗಳ ಬಗ್ಗೆ ಪೋಷಕರಿಗೆ ಮಾಹಿತಿಯನ್ನು ನೀಡಲಾಯಿತು.
ಶಿಬಿರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಣಾಧಿಕಾರಿ ಹನುಮ ನಾಯಕ್, ಡಿವೈಪಿಸಿ ಕೆಂಪಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ಸೈಯದ್ ಅನ್ನಿಸ, ವೈದ್ಯಾಧಿಕಾರಿ ಶಾರದಾ, ಕ್ಷೇತ್ರ ಸಮನ್ವಯ ಅಧಿಕಾರಿ ಹನುಮಂತರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜೈ ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವಲಿಂಗಯ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.