ಬೆಂಗಳೂರು: ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಚಾಲನೆ ಮಾಡಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.
ಮೂಲತಃ ರಾಯಚೂರಿನ ಸಿಂಧನೂರು ನಿವಾಸಿ 37 ವರ್ಷದ ಬಸವರಾಜು ಮೃತಪಟ್ಟವರು. ಇವರು ಲಗ್ಗೆರೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು.
ಬಾಲಾಜಿ ಟೋಲ್ ಬಳಿ ಲಾರಿಯನ್ನು ನಿಲ್ಲಿಸಿ ಚಾಲಕ ಟೀ ಕುಡಿಯಲು ಹೋಗಿದ್ದಾರೆ. ಆ ಸಮಯದಲ್ಲಿ ಮಳೆ ಬರುತ್ತಿದ್ದ ಕಾರಣ ಬಸವರಾಜು ಲಾರಿ ಕೆಳಗೆ ಹೋಗಿ ಅಲ್ಲೇ ಮಲಗಿದ್ದಾರೆ.
ಕೆಲ ಸಮಯದ ಬಳಿಕ ಲಾರಿ ಚಾಲಕ ಬಂದಿದ್ದು ವ್ಯಕ್ತಿ ಕೆಳಗೆ ಮಲಗಿರುವುದನ್ನು ಗಮನಿಸದೆ, ಲಾರಿಯನು ಚಾಲನೆ ಮಾಡಿದ ಪರಿಣಾಮ ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಪೀಣ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು, ವ್ಯಕ್ತಿಯ ಮೃತದೇಹವನ್ನು ಸಪ್ತಗಿರಿ ಆಸತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.