Site icon Harithalekhani

ನಿರ್ದೇಶಕ RGVಗೆ ಸಂಕಷ್ಟ: ಆಂಧ್ರ ಪೊಲೀಸ್ ಸಮನ್ಸ್..!

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಪುತ್ರ-ಸೊಸೆ, ಟಿಡಿಪಿ ಮುಖಂಡರು ಹಾಗೂ ಡಿಸಿಎಂ ಪವನ್ ಕಲ್ಯಾಣ್ ಫೋಟೊಗಳನ್ನು ತಿರುಚಿ ಜಾಲತಾಣದಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಮಡ್ಡಿಪಾಡು ಪೊಲೀಸರು ಬುಧವಾರ ಸಮನ್ಸ್‌ ನೀಡಿದ್ದಾರೆ.

ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ವರ್ಮಾ ನಿವಾಸಕ್ಕೆ ಬುಧವಾರ ಬೆಳಗ್ಗೆ ಭೇಟಿ ನೀಡಿದ ಪ್ರಕಾಶಂ ಜಿಲ್ಲೆಯ ಪೊಲೀಸರ ತಂಡ, ನ.19ರಂದು ಮಡ್ಡಿಪಾಡು ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗುವಂತೆ ಖುದ್ದಾಗಿ ನೋಟಿಸ್‌ ನೀಡಿದೆ.

ನೋಟಿಸ್ ಸ್ವೀಕರಿಸಿದ ವರ್ಮಾ, ತನಿಖೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ಪ್ರಕಾಶಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್. ದಾಮೋದರ್ ತಿಳಿಸಿದ್ದಾರೆ.

ಮಡ್ಡಿಪಾಡು ನಿವಾಸಿ ರಾಮಲಿಂಗಂ(45) ಎಂಬವರ ದೂರಿನ ಮೇರೆಗೆ ಆರ್‌ಜಿ ವರ್ಮಾ ವಿರುದ್ದ ಐಟಿ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

Exit mobile version