ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಿನಿ ಮಹಾಸಮರವಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ (karnataka by election) ಇಂದು ನಡೆಯುತ್ತಿದ್ದು, ಚುನಾವಣೆ ಆರಂಭದಲ್ಲಿ ನೀರಸ ಆರಂಭ ಕಂಡು, ಪ್ರಸ್ತುತ ಚುರುಕು ಪಡೆದಿದೆ.
ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 06 ಗಂಟೆಯ ವರೆಗೆ ನಡೆಯಲಿದೆ.
11 ಗಂಟೆ ವರದಿ ಅನ್ವಯ ಚನ್ನಪಟ್ಟಣ ಕ್ಷೇತ್ರದಲ್ಲಿ 27.02%, ಶಿಗ್ಗಾವಿ 26.01% ಹಾಗೂ ಸಂಡೂರಿನಲ್ಲಿ 25.93% ರಷ್ಟು ಮತದಾನ ನಡೆದಿದೆ.
ಚನ್ನಪಟ್ಟಣ: ಶೇ 27.02ರಷ್ಟು ಮತದಾನ
ಚನ್ನಪಟ್ಟಣ ವಿಧಾನಸಭೆಯ ಉಪಚುನಾಚಣೆಯ 276 ಮತಗಟ್ಟೆಗಳಲ್ಲಿಯು ಶಾಂತಿಯುತ ಮತದಾನ ನಡೆಯುತ್ತಿದೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 27.02ರಷ್ಟು ಮತದಾನವಾಗಿದೆ.
ಒಟ್ಟು 2.32 ಲಕ್ಷ ಮತಗಳ ಪೈಕಿ ಇದುವರೆಗೆ 62,941 ಮತಗಳು ಚಲಾವಣೆಯಾಗಿವೆ. ಆ ಪೈಕಿ 31,160 ಪುರುಷರು ಮತ್ತು 31,781 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಕಣ ಜಿದ್ದಾಜಿದ್ದಿಯಿಂದ ಕೂಡಿದೆ. ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಗಣಿ ಜಿಲ್ಲೆ ಸಂಡೂರು ಮೀಸಲು ಕ್ಷೇತ್ರದಲ್ಲಿ ಅತಿ ಕಡಿಮೆ 6, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ 8 ಹಾಗೂ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಪಕ್ಷೇತರರರು ಸೇರಿದಂತೆ ಅತಿ ಹೆಚ್ಚು 31 ಅಭ್ಯರ್ಥಿಗಳು ಸೇರಿ ಒಟ್ಟು 45 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.
ಜಿದ್ದಾಜಿದ್ದಿನ ಸ್ಪರ್ಧೆ: ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲವೇ ಎನ್‌ಡಿಎ ಗೆದ್ದರೆ ಸರಕಾರದ ಮೇಲೆ ನೇರವಾಗಿ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ಹಾಗೂ ಶಾಸಕರು ಬಿರುಸಿನ ಪ್ರಚಾರ ನಡೆಸಿದ್ದರು.
ಸರಕಾರಕ್ಕೆ ಉಪಚುನಾವಣೆಯಲ್ಲಿ ಮುಖಭಂಗ ಉಂಟು ಮಾಡಬೇಕೆಂದು ಬಿಜೆಪಿ- ಜೆಡಿಎಸ್ ನಾಯಕರು ಸೇರಿಗೆ ಸವ್ವಾಸೇರು ಎಂಬಂತೆ ಪ್ರಚಾರ ನಡೆಸಿದ್ದಾರೆ.
ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾದ ಚನ್ನಪಟ್ಟಣ ದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಠೆಯ ಕಣವಾಗಿರುವ ಈ ಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಅದರಂತೆ ಸಂಡೂರು ಕೂಡ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.