ಒಂದು ಕಾಡಿನಲ್ಲಿ ಒಂದು ಆನೆ ಇತ್ತು. ಕೆಲವು ಬೇಟೆಗಾರರು ಶೂಲ ಹಿಡಿದು ಅದರ ಬೆನ್ನಿಗೆ ಬಿದ್ದರು. ಆನೆ ಭಯದಿಂದ ಓಟ ಕಿತ್ತಿತು. ಅತ್ತ ಕಡೆಯಿಂದ ಬಂದ ಒಂದು ಸಿಂಹ ದೊಡ್ಡದಾಗಿ ಗರ್ಜಿಸಿತು.
ಬೇಟೆಗಾರರು ಹೆದರಿ ಓಡಿದರು. ಆದ್ದರಿಂದ ಆನೆ. ಸಿಂಹಕ್ಕೆ ವಂದಿಸಿ, ‘ನೀನು ಮಾಡಿದ ಈ ಸಹಾಯವನ್ನು ನಾನೆಂದೂ ಮರೆಯನು. ನೀನೇನಾದರೂ ಅಪಾಯದಲ್ಲಿ ಸಿಲುಕಿಕೊಂಡಾಗ ನನ್ನ ಪ್ರಾಣವನ್ನು ಧಾರೆ ಎರೆದಾದರೂ ನಿನ್ನ ಋಣವನ್ನು ತೀರಿಸುತ್ತೇನೆ’ ಎಂದಿತು.
ಸಿಂಹ ಹುಸಿನಗೆ ನಕ್ಕು, ‘ನಿನ್ನನ್ನು ನೋಡುತ್ತಿದ್ದರೆ ನನಗೆ ಅಯ್ಯೋ ಅನ್ಸುತ್ತೆ. ನೀನು ನನಗೆ ಸಹಾಯ ಮಾಡುವುದೇನು ಬಂತು! ನನ್ನನ್ನು ನೋಡುತ್ತಲೇ ಎಲ್ಲರೂ ಗಡಗಡ ನಡುಗಿ ಹೋಗ್ತಾರೆ ಗೊತ್ತಾ?’ ಎಂದಿತು ಪೊಗರಿನಿಂದ.
ಒಂದು ದಿನ ಸಿಂಹಕ್ಕೆ ವಿಪರೀತ ಬಾಯಾರಿಕೆಯಾಗಿ ಕೆರೆಗೆ ಇಳಿಯಿತು. ಆ ಕೆರೆಯಲ್ಲಿ ಆಳದವರೆಗೂ ಹೂಳು, ಕೆಸರು ಮಣ್ಣು ತುಂಬಿತ್ತು. ನೀರು ಕುಡಿದ ಸಿಂಹಕ್ಕೆ ಹೊರಬರಲಾಗಲಿಲ್ಲ. ಕೆಸರಿನಲ್ಲಿ ಹೂತು ಹೋದ ಅದಕ್ಕೆ ಪ್ರಾಣ ಭಯ ಆವರಿಸಿ, ‘ಯಾರಾದರೂ ಕಾಪಾಡಿ! ಯಾರಾದರೂ ಕಾಪಾಡಿ!’ ಎಂದು ಆಕ್ರಂದನ ಮಾಡಿತು.
ಹತ್ತಿರದಲ್ಲೇ ಬಿದಿರಿನ ಚಿಗುರನ್ನು ಮೇಯುತ್ತಿದ್ದ ಆನೆಗೆ, ಸಿಂಹದ ಆಕ್ರಂದನ ಕೇಳಿ ಕೆರೆಯ ದಂಡೆಗೆ ಧಾವಿಸಿತು. ಕೂಡಲೇ ತನ್ನ ಸೊಂಡಿಲಿನಿಂದ ಸಿಂಹದ ಕೊರಳಿಗೆ ಸುತ್ತಿ ಅದನ್ನು ದಂಡೆಯ ಮೇಲಕ್ಕೆ ಎಳೆದಿತ್ತು. ಸಿಂಹವು ಬದುಕುಳಿದಿತ್ತು.
‘ನನಗೆ ಅಪಾಯವೇ ಬರುವುದಿಲ್ಲವೆಂದು ಬೀಗಿದ್ದೆ ಪ್ರಕೃತಿ ಸೃಷ್ಟಿಸುವ ವಿಪತ್ತುಗಳ ಮುಂದೆ ಎಂಥ ಬಲಶಾಲಿಗಳಾದರೂ ತಲೆ ತಗ್ಗಿಸಬೇಕಾದ್ದೇ. ಅಪಾಯದಿಂದ ಪಾರಾಗಲು ಪರಸ್ಪರ ಒಬ್ಬರ ಸಹಾಯ ಇನ್ನೊಬ್ಬರಿಗೆ ಅತ್ಯಗತ್ಯ ಎಂಬುದನ್ನು ಅನುಭವ ಪೂರ್ಣಾಗಿ ತಿಳಿದುಕೊಂಡೆ’ ಎಂದು ಸಿಂಹ ಕೃತಜ್ಞತೆಯಿಂದ ಹೇಳಿತು.
ಅಂದಿನಿಂದ ಸಿಂಹ ಮತ್ತು ಆನೆ ಎರಡೂ ಸ್ನೇಹಪರರಾಗಿ ಜೀವಿಸಿಕೊಂಡಿದ್ದವು.
ಕೃಪೆ: ಸಾಮಾಜಿಕ ಜಾಲತಾಣ (ಬರಹಗಾರರ ಮಾಹಿತಿ ಲಭ್ಯವಿಲ್ಲ)