Site icon ಹರಿತಲೇಖನಿ

ಬೆಂಗಳೂರು-ತುಮಕೂರು ಹೆದ್ದಾರಿ ಕಾಮಗಾರಿ ಪರಿಶೀಲಿಸಿದ ವಿ.ಸೋಮಣ್ಣ

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಮಂದಗತಿಯಲ್ಲಿ ಸಾಗುತ್ತಿರುವ ಬೆಂಗಳೂರು- ತುಮಕೂರು ಹೆದ್ದಾರಿ 6 ಪಥದ ರಸ್ತೆ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಮುಗಿಸುವಂತೆ‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸೂಚಿಸಿದರು.

2016 ರಲ್ಲಿ ಆರಂಭವಾದ ಕಾಮಗಾರಿ ಕಳೆದ 8 ವರ್ಷಗಳಿಂದ ಕುಂಟುತ್ತಾ ಸಾಗಿದೆ. ನೆಲಮಂಗಲ ಟೋಲ್ ನಿಂದ ತುಮಕೂರು ವರಗೆ 45 ಕಿಮೀ ಕಾಮಗಾರಿ ನಡೆಯುತ್ತಿದೆ.

ಒಟ್ಟು 2048 ಕೋಟಿ ರೂಪಾಯಿಗಳನ್ನು ಭಾರತ ಸರ್ಕಾರ ಭರಿಸಿದೆ. ಆದರೂ 6 ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಇಂದಿನಿಂದಲೇ ಚಾಲನೆ ದೊರೆತಿದೆ‌ಎಂದರು.

ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೆಲವೆಡೆ ಕಾಮಗಾರಿ ವಿಳಂಬವಾಗಿದ್ದು ನಿವಾರಣೆ ಆಗಿದೆ ಪ್ರಸ್ತುತ 4 ಕಡೆ ಮಾತ್ರ ಭೂ ಸ್ವಾಧೀನ ಸಮಸ್ಯೆಯಿದ್ದು ಶೀಘ್ರದಲ್ಲೇ ಬಗೆಹರಿಯಲಿದೆ ಎಂದರು
ಇಂದು ಬೆಳಿಗ್ಗೆ ನೆಲಮಂಗಲ ಟೋಲ್ ಬಳಿಯಿಂದ ತುಮಕೂರು ಮಾರ್ಗವಾಗಿ ಟಿ.ಬೇಗೂರು, ಕುಲವನಹಳ್ಳಿ, ಹನುಮಂತಪುರ, ಬಿಲ್ಲನಕೋಟೆ ನೆಲಮಂಗಲ ದಾಬಸ್ಪೇಟೆ ಭಾಗಗಳಲ್ಲಿ ರಸ್ತೆ ಕಾಮಗಾರಿ ವೀಕ್ಷಿಸಿದ ಅವರು ನಿಧಾನಗತಿಯ ಕಾಮಗಾರಿ ಬಗೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಏನನ್ನು ಕೇಳಿದರೂ ನೋಡ್ತೇವೆ ಮಾಡ್ತೇವೆ ಅನ್ನುತ್ತೀರಿ, ಹಾಗಾದರೆ ಇಷ್ಟುದಿನ ತಾವು ಮಾಡಿರುವುದೇನು? ಇನ್ನು ಮುಂದೆ ಸಬೂಬುಗಳನ್ನು ಸಹಿಸುವುದಿಲ್ಲ. ನಿಮ್ಮ ಇಂತಹ ಕೆಲಸಗಳಿಂದ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಜನ ಪ್ರಾಣ ಕಳೆದುಕೊಳ್ಳುತಿದ್ದಾರೆಂದರು.

ಕೇಂದ್ರ ಹೆದ್ದಾರಿ ಖಾತೆ ಸಚಿವರಾದ ನಿತಿನ್ ಗಡ್ಕರಿಯವರ ಗಮನಕ್ಕೆ ಈ ಹೆದ್ದಾರಿ ಕಾಮಗಾರಿ ವಿಳಂಬದ ಬಗೆಗೆ ತಂದ ತಕ್ಷಣ ತಾವೇ ಖುದ್ದಾಗಿ ಪರಿಶೀಲಿಸಿ, ಮಾಹಿತಿ ನೀಡಿದರೆ ಕಾಮಗಾರಿ ಚುರುಕುಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದುದರಿಂದ ಕಾಮಗಾರಿಗಳನ್ನು ವೀಕ್ಷಣೆ ಮಾಡಲಾಗುತ್ತಿದೆ ಎಂದರು.

ಹೆದ್ದಾರಿಯ ಗುಣಮಟ್ಟ, ಸುರಕ್ಷತೆ, ಸಾರ್ವಜನಿಕ ರಿಗೆ ನೀಡುವ ಸೌಲಭ್ಯಗಳು ಬಗೆಗೆ ಮಾಹಿತಿ ಪಡೆದು, ಸರ್ವೀಸ್ ರಸ್ತೆಗಳನ್ನು ಸರಿಯಾಗಿ ನಿರ್ವಹಿಸಲು ಸೂಚಿಸಿದರು.

ರಸ್ತೆಯುದ್ದಕ್ಕೂ ಅಕ್ಕಪಕ್ಕದ ನಿವಾಸಿಗಳು ಸಚಿವರ ಬಳಿ ಹೆದ್ದಾರಿಗೆ ಸಂಬಂಧಿಸಿದಂತೆ ತಮ್ಮ ಅಗತ್ಯತೆಗಳನ್ನು ಮನವಿ ಮಾಡಿದರು

ಅಧಿಕಾರಿಗಳು ಹತ್ತು ತಿಂಗಳೊಳಗಾಗಿ ಕಾಮಗಾರಿ ಪೂರಣಗೊಳಿಸುವ ಭರವಸೆ ನೀಡಿದ್ದಾರೆ

ನಾನು ತಿಂಗಳಿಗೊಮ್ಮೆ ಕಾಮಗಾರಿ ಪರಿಶೀಲಿಸುವುದಾಗಿ ಸಚಿವರು ತಿಳಿಸಿದರು

ವೀಕ್ಷಣೆಯಲ್ಲಿ ಜಿಲ್ಲಾಧಿಕಾರಿ ಶಿವಶಂಕರ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಜರಿದ್ದರು.

Exit mobile version