ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಣ ಕೊಟ್ಟು ಮತ ಪಡೆಯಲು ನೋಡುತ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಆರೋಪಿಸಿದರು.
ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಎರಡು ಬಾರಿ ಚನ್ನಪಟ್ಟಣದಲ್ಲಿ ಗೆದ್ದರು. ಅವರು ಹೇಗೆ ಗೆದ್ದರು ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡ, ಕುಮಾರಸ್ವಾಮಿ ಕಳೆದ ಎಂಟು ದಿನದಿಂದ ಚನ್ನಪಟ್ಟಣದಲ್ಲೇ ಇದ್ದಾರೆ. ಸಿಪಿ ಯೋಗೇಶ್ವರ್ ಎಲ್ಲಾ ಕೆರೆ ತುಂಬಿಸಿದ್ದನ್ನು ನೀವೇ ನೋಡಿದ್ದೀರಿ. ಕುಮಾರಸ್ವಾಮಿ ಏನುಮಾಡಿದ್ರು ಅದು ಗೊತ್ತಿದೆ.
ಯೋಗೇಶ್ವರ್ ಒಕ್ಕಲಿಗರಲ್ಲವೇ. ದೇವೇಗೌಡರಿಗೆ ವಯಸ್ಸಾಗಿದೆ. ಆದರೂ ರಾಜಕಾರಣ ಮಾಡುತ್ತಿದ್ದಾರೆ. ದೇವೇಗೌಡ ಅವರ ಇಡೀ ಕುಟುಂಬ ಚನ್ನಪಟ್ಟಣದಲ್ಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಮಾಡಿರುವ 700 ಕೋಟಿ ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸಿದ ಮಾಜಿ ಸಂಸದ, ಸುಳ್ಳು ಆರೋಪ ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರಲ್ಲ. ಸತ್ಯಾಸತ್ಯತೆ ಪರಿಶೀಲಿಸಿ, ದಾಖಲೆ ಇದ್ದರೆ ಬಹಿರಂಗ ಪಡಿಸಲಿ. ಮಹಾರಾಷ್ಟ್ರ ಚುನಾವಣೆ ವೇಳೆ ಈ ಆರೋಪವನ್ನು ಪ್ರಧಾನಿಯಿಂದ ನಾನು ನಿರೀಕ್ಷೆ ಮಾಡಿರಲಿಲ್ಲ ಎಂದರು.
ಪ್ರಧಾನಿ ನಾಲ್ಕು ಲಕ್ಷ ಕೋಟಿ ರೂ. ತೆರಿಗೆ ಬಗ್ಗೆ ಯಾಕೆ ಮಾತನಾಡ್ತಿಲ್ಲ. ಕರ್ನಾಟಕದ ಮೇಲಿನ ಪ್ರೀತಿ ತೋರಿಸಲಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಹೇಳಲಿ. ಗುಜರಾತ್‌ಗೆ ಮೊದಲ ಆದ್ಯತೆ ಕೊಡ್ತಾರೆ. ದಕ್ಷಿಣ ಭಾರತಕ್ಕೆ ಯಾಕೆ ಕೊಡ್ತಿಲ್ಲ.
ಬಿಜೆಪಿಗೆ ರಾಜ್ಯದಲ್ಲಿ ನಿರಂತರವಾಗಿ ಅವಕಾಶ ನೀಡಲಾಗುತ್ತಿದೆ. ದಕ್ಷಿಣ ಭಾರತ ಹೆಚ್ಚಿನ ಸ್ಥಾನ ಕೊಡ್ತಿದೆ. ರಾಜ್ಯಕ್ಕೆ ಯಾಕೆ ಅನ್ಯಾಯ ಮಾಡ್ತಿದ್ದಾರೆ ಹೇಳಲಿ ಎಂದು ಪ್ರಶ್ನಿಸಿದರು.
ಉಕ್ಕು ಕಂಪನಿಗಳಿಂದ ಹೆಚ್‌ಡಿಕೆ ಹಣ ಸಂಗ್ರಹಿಸಿದ್ದಾರೆಂಬ ಸಚಿವ ಚಲುವರಾಯಸ್ವಾಮಿ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಚಲುವರಾಯಸ್ವಾಮಿ ಅವರು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಕುಮಾರಸ್ವಾಮಿ ಆತ್ಮೀಯರು ಅವರಿಗೆ ಗೊತ್ತಿದ್ದಾರೆ. ಹಾಗಾಗಿ ಅವರಿಗೆ ಮಾಹಿತಿ ಬಂದಿರಬಹುದು ಎಂದು ತಿಳಿಸಿದರು.