ಬಹಳ ಕಾಲದ ಹಿಂದೆ ಒಂದು ಸುಂದರವಾದ ಸಮೃದ್ಧಿಯಿಂದ ಕೂಡಿದ ‘ಹಳ್ಳಿ ಇತ್ತು. ಜನರು ತಮ್ಮ ಹೊಲಗದ್ದೆಗಳಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು.
ಹಸು, ಎಮ್ಮೆ, ಆಡು, ಕುರಿಗಳು ಸಾಕಷ್ಟಿದ್ದವು. ಗ್ರಾಮಸ್ಥರೆಲ್ಲರೂ ದೇವರಲ್ಲಿ ಭಕ್ತಿಯುಳ್ಳವರೂ, ದಾನಧರ್ಮ, ಕರುಣೆಯಿಂದ ಕೂಡಿದವರೂ ಆಗಿದ್ದರು. ಆ ಹಳ್ಳಿಯಲ್ಲಿ ಚಿನ್ನದ ಒಂದು ದೊಡ್ಡ ಗಟ್ಟಿ ಇತ್ತು. ಆದು ಗ್ರಾಮಸ್ಥರೆಲ್ಲರಿಗೂ ಸೇರಿದ ಆಸ್ತಿಯಾಗಿತ್ತು.
ತಮ್ಮ ಆ ಅಮೂಲ್ಯ ಸಂಪತ್ತನ್ನು ಸುತ್ತಮುತ್ತಲಿನ ಹಳ್ಳಿಯವರು ತೆಗೆದುಕೊಂಡು ಹೋಗಬಹುದೆಂಬ ಹೆದರಿಕೆ ಇತ್ತು. ಆದ್ದರಿಂದ ಅವರು ಒಂದು ದಿನ ಸಭೆ ಸೇರಿ, ಚಿನ್ನದ ಗಟ್ಟಿಯ ಸಂರಕ್ಷಣೆ ಮಾಡುವುದು ಹೇಗೆ ಎಂದು ಚರ್ಚಿಸತೊಡಗಿದರು.
ಒಬ್ಬೊಬ್ಬರು ಒಂದೊಂದು ಸಲಹೆ ನೀಡಿದರು. ಕೆಲವರು ಊರಿನ ಹಿರಿಯರೊಬ್ಬರ ಮನೆಯಲ್ಲಿ ಅಡಗಿಸಿಡೋಣವೆಂದರು. ಇನ್ನು ಕೆಲವರು ದೇವಾಲದೊಳಗೆ ಇಡೋಣವೆಂದರು. ಆದರೆ ಒಬ್ಬ ಚಿನ್ನದ ಗಟ್ಟಿಯನ್ನು ‘ನಾವು ವ್ಯವಸಾಯ ಮಾಡದಿರುವ ಭೂಮಿಯಲ್ಲಿ ಹೂಳಿಬಿಡೋಣ’ ಎಂದು ಸಲಹೆ ಕೊಟ್ಟನು. ಎಲ್ಲರಿಗೂ ಇದು ಒಪ್ಪಿಗೆಯಾಯಿತು.
ಮರುದಿನ ಒಂದು ಬಂಜರು ಭೂಮಿಯಲ್ಲಿ ದೊಡ್ಡ ಗುಂಡಿ ತೆಗೆದು ಚಿನ್ನದ ಗಟ್ಟಿಯನ್ನಿಟ್ಟು ಮಣ್ಣು ಮುಚ್ಚಿದರು. ಇನ್ನು ತಮ್ಮ ಸಂಪತ್ತು ಸುರಕ್ಷಿತವಾಗಿರುತ್ತದೆಂದು ಭಾವಿಸಿದರು.
ಈ ವಿಚಾರವನ್ನು ಪಕ್ಕದ ಊರಿನವರಿಗೆ ಯಾರೂ ತಿಳಿಸುವುದು ಬೇಡವೆಂದು ಮಾತನಾಡಿಕೊಂಡರು. ಕಾಲದ ಚಕ್ರ ಉರುಳಿ ಬಹು ವರ್ಷಗಳಾದವು. ಆ ಬಂಜರು ಭೂಮಿಯಲ್ಲಿ ಚಿನ್ನದ ಗಟ್ಟಿ ಹೂಳಿದ್ದ ವಿಚಾರ ಅರಿತಿದ್ದ ಹಳ್ಳಿಗರು ಮರಣ ಹೊಂದಿದರು. ಆ ಊರಿನ ಹಿರಿಯರು ಆ ಚಿನ್ನದ ಗಟ್ಟಿಯ ವಿಷಯವನ್ನು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಿಳಿಸಿರಲಿಲ್ಲ.
ಸುಮಾರು ವರ್ಷಗಳ ನಂತರ ಒಬ್ಬ ಸಾಹಸೀ ಯುವ ರೈತ ಬಂಜರು ಭೂಮಿಯಲ್ಲಿ ಉಳುಮೆ ಮಾಡಲೆಂದು ಹಾರೆ ಪಿಕಾಸಿನಿಂದ ಅಗೆಯತೊಡಗಿದ.
ಭೂಮಿಯನ್ನು ಹಸನು ಮಾಡಿ, ನೇಗಿಲನ್ನು ಉಪಯೋಗಿಸಿ ಉಳುವಾಗ ಯಾವುದೋ ವಸ್ತು ತಾಗಿ ‘ಠಣ್’ ಎಂಬ ಶಬ್ದವಾಯಿತು. ಆ ಯುವಕ ಆ ಜಾಗದ ಮಣ್ಣು ತೆಗೆದು ನೋಡುತ್ತಾನೆ, ಏನಾಶ್ಚರ್ಯ! ಫಳ ಫಳನೆ ಹೊಳೆಯುವ ಚಿನ್ನದ ಗಟ್ಟಿ, ಆಹಾ ತನಗೆ ದೇವರು ನಿಧಿ ಕರುಣಿಸಿದನೆಂದು ಸಂತೋಷಪಟ್ಟನು.
ಯಾರೂ ನೋಡಲಿಲ್ಲವೆಂದು ತಿಳಿದು ಮಣ್ಣನ್ನು ತೆಗೆದು ಚಿನ್ನದ ಗಟ್ಟಿಯನ್ನು ಹೊರಗೆ ತೆಗೆಯಲು ನೋಡಿದ. ಆದರೆ ಅದು ತುಂಬಾ ಭಾರವಿದ್ದುದರಿಂದ ಹೊರಗೆ ತೆಗೆಯಲಾಗಲಿಲ್ಲ. ಅವನು ಆ ಗಟ್ಟಿಯ ಸುತ್ತಲೂ ಹಗ್ಗ ಕಟ್ಟಿ ಎಳೆಯತೊಡಗಿದನು. ಆದರೂ ಅವನಿಂದ ಅದನ್ನು ಭೂಮಿಯಿಂದ ಹೊರಗೆ ತೆಗೆಯಲಾಗಲಿಲ್ಲ. ಯುವಕ ಚಿನ್ನದ ಗಟ್ಟಿಯನ್ನು ತೆಗೆಯುವುದು ಹೇಗೆಂದು ಯೋಚಿಸತೊಡಗಿದ.
ಕೊನೆಗೆ ಉಪಾಯ ಮೂಡಿತು. ಆ ಚಿನ್ನದ ಗಟ್ಟಿಯನ್ನು ನಾಲ್ಕು ತುಂಡು ಮಾಡಿ ಮನೆಗೆ ಕೊಂಡೊಯ್ಯುವುದೆಂದು ಯೋಚಿಸಿದನು. ಚಿನ್ನದ ಗಟ್ಟಿಯ ಒಂದು ಭಾಗ ಮಾರಿ ನಿತ್ಯದ ಖರ್ಚಿಗೆ ಬಳಸುವುದು, ಎರಡನೆಯದನ್ನು ಮಾರಿ ನೇಗಿಲು, ಕತ್ತಿ, ಗುದ್ದಲಿ ಇತ್ಯಾದಿ
ತೆಗೆದುಕೊಳ್ಳುವುದು, ಮೂರನೆಯ ತುಂಡನ್ನು ಮಾರಿ ಮಳೆಗಾಲಕ್ಕೆ, ಕಷ್ಟದ ದಿನಗಳಲ್ಲಿ ಉಪಯೋಗಿಸುವುದೆಂದೆಣಿಸಿದನು. ನಾಲ್ಕನೆ ತುಂಡನ್ನು ಮಾರಿ ದಾನಧರ್ಮಕ್ಕಾಗಿ ಬಳಸುವುದೆಂದು ನಿರ್ಧರಿಸಿದನು.
ನಂತರ, ಆ ದೊಡ್ಡ ಚಿನ್ನದ ಗಟ್ಟಿಯನ್ನು ನಾಲ್ಕ ತುಂಡುಗಳನ್ನಾಗಿ ಕತ್ತರಿಸಿದನು. ಅವುಗಳನ್ನು ಒಂದೊಂದಾಗಿ ಸುಲಭವಾಗಿ ತನ್ನ ಮನೆಗೆ ತೆಗೆದುಕೊಂಡು ಹೋದನು.
ಮುಂದೆ ತನ್ನ ಯೋಜನೆಯಂತೆ ಕಾರ್ಯ ಪ್ರವೃತ್ತನಾದನು. ಹೀಗೆ ಸಮಸ್ಯೆ ಎದುರಾದಾಗ ತನ್ನ ಬುದ್ಧಿವಂತಿಕೆಯಿಂದ ಪರಿಹರಿಸಿಕೊಂಡು ತನ್ನ ಮನೆಗೆ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿ ವಿನಿಯೋಗಿಸಿ ಬಹಳ ಕಾಲ ಸುಖವಾಗಿ ಬದುಕಿದನು.
ಕೃಪೆ: ಸಾಮಾಜಿಕ ಜಾಲತಾಣ.