Site icon ಹರಿತಲೇಖನಿ

ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ; ಜಮೀರ್ ವಿರುದ್ಧ ಬಿ.ಮುನೇಗೌಡ ಆಕ್ರೋಶ

ಬೆಂ.ಗ್ರಾ.ಜಿಲ್ಲೆ: ಸಚಿವ ಜಮೀರ್‌ ಅಹ್ಮದ್‌ ಅವರು ಒಕ್ಕಲಿಗರನ್ನು ಅಥವಾ ಹಿಂದೂಗಳನ್ನು ಖರೀದಿಸುತ್ತೇನೆ ಎಂದು ಹೇಳುತ್ತಿದ್ದಾರೆಯೇ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಮಾತನಾಡಿದ ಬಿ.ಮುನೇಗೌಡ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಚಾಮರಾಜಪೇಟೆಗೆ ಹೋಗಿ ರ‍್ಯಾಲಿ ಮಾಡಿ, ಸೀಮೇ ಎಣ್ಣೆ ಡಬ್ಬಿಯನ್ನು ಹೊತ್ತು ಮನೆ ಮನೆಗೆ ತೆರಳಿ ಜಮೀರ್‌ ಅಹ್ಮದ್‌ರನ್ನು ಗೆಲ್ಲಿಸಿ ಅವರಿಗೆ ಜೀವನ ನೀಡಿದ್ದರು. ಅದೇ ಜಮೀರ್‌ ಅಹ್ಮದ್‌ ಈಗ ದೇವೇಗೌಡರ ಕುಟುಂಬವನ್ನು ಖರೀದಿಸುತ್ತೇವೆ ಎಂದು ಹೇಳಿದ್ದಾರೆ.

ದೇಶದ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿ ನೀರು ಹಂಚಿಕೆಗಾಗಿ ಶ್ರಮಿಸಿದರು. ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರು. ಅಂತಹವರನ್ನು ಖರೀದಿಸುತ್ತೇನೆ ಎಂದು ಜಮೀರ್‌ ಹೇಳುತ್ತಾರೆ. ಇದು ಒಕ್ಕಲಿಗರನ್ನು ಖರೀದಿಸುತ್ತೇವೆಂದು ಅರ್ಥವೇ ಅಥವಾ ಹಿಂದೂಗಳನ್ನು ಖರೀದಿಸುತ್ತೇವೆಂದು ಅರ್ಥವೇ ಎಂದು ಪ್ರಶ್ನೆ ಮಾಡಿದರು.

ಈಗಾಗಲೇ ಸಚಿವ ಜಮೀರ್‌ ಅಹ್ಮದ್‌ ರೈತರ ಜಮೀನು ಕಬಳಿಸುತ್ತಿದ್ದಾರೆ ಎಂಬ ಆರೋಪವಿದೆ. ಈಗ ದೇವೇಗೌಡರ ಕುಟುಂಬ ಖರೀದಿಸಲು ಇರಾಕ್‌, ಇರಾನ್‌ನಿಂದ ಹಣ ಬಂದಿದೆಯೇ? ಎಂದು ಮುನೇಗೌಡ ಕಿಡಿಕಾರಿದರು.

ನಾವು ಮಣ್ಣಿನ ಮಕ್ಕಳಾಗಿದ್ದು, ಇದೇ ನಾಡಿನಲ್ಲಿ ಹುಟ್ಟಿ ಬೆಳೆದಿದ್ದೇವೆ. ಚುನಾವಣೆ ನಡೆಯುವ ಸಮಯದಲ್ಲೇ ಕಾಂಗ್ರೆಸ್‌ ಸಚಿವರು ಖರೀದಿ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಜಮೀರ್ ಅಹಮದ್ ಖಾನ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದರು.

Exit mobile version