ಒಮ್ಮೆ ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ರಾಜಸ್ಥಾನದ ಆಳ್ವಾರ್ ಎಂಬಲ್ಲಿಗೆ ಬಂದು ತಲುಪಿದರು. ಆಗ ಮೇಜರ್ ರಾಮಚಂದ್ರ ಎಂಬಾತ ಮಂಗಳ ಸಿಂಹ ರಾಜನಿಗೆ ದಿವಾನರಾಗಿದ್ದರು. ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು.
ಸಾಧು ಜನರನ್ನು ಗೌರವದಿಂದ ಕಾಣುತ್ತಿದ್ದರು. ಅವರು ಸ್ವಾಮಿ ವಿವೇಕಾನಂದರನ್ನು ತಮ್ಮ ಮನೆಗೆ ಕರೆಯಿಸಿದರು. ದೈವ ಲೀಲೆಯೆಂಬಂತೆ ರಾಜರು ಅಲ್ಲಿಗೆ ಬಂದಿದ್ದರು.
ರಾಜರು ವಿವೇಕಾನಂದರನ್ನು ಕುರಿತು ‘ಬಾಬಾಜೀ, ಮೂರ್ತಿ ಪೂಜೆಯಲ್ಲಿ ನನಗೆ ನಂಬಿಕೆ ಇಲ್ಲ. ಅದರಿಂದ ಯಾವ ಪ್ರಯೋಜನವಿಲ್ಲ ಎಂಬುದು ನನ್ನ ಅನಿಸಿಕೆ’ ಎಂದರು. ‘ನೀವು ನನ್ನನ್ನು ತಮಾಷೆ ಮಾಡುವಿರೊ ಏನೋ ಗೊತ್ತಾಗುತ್ತಿಲ್ಲ’ ಎಂದರು ವಿವೇಕಾನಂದರು. ‘ಇಲ್ಲ ಸ್ವಾಮೀಜಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ ಅಷ್ಟೇ’ ಎಂದರು ರಾಜರು.
‘ಸರಿ’ ಎನ್ನುತ್ತಾ ವಿವೇಕಾನಂದರು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಅಲ್ಲೇ ನೇತು ಹಾಕಿದ ರಾಜರ ಫೋಟೋದತ್ತ ಕೈ ತೋರಿಸಿ ‘ಅದರ ಮೇಲೆ ಎಲ್ಲರೂ ಉಗಿಯಿರಿ’ ಎಂದರು. ಜನರು ಗೊಂದಲಕ್ಕೆ ಈಡಾದರು.
ರಾಜನನ್ನು ಎಲ್ಲರೂ ದಿಟ್ಟಿಸಿದರು. ರಾಜ ಮಂಗಳ ಸಿಂಹನಿಗೆ ಇದೇಕೆ ಸ್ವಾಮಿಜಿಯವರು ಹೀಗೆ ನುಡಿಯುತ್ತಿದ್ದಾರೆ? ಎಂಬುದರ ಅಂತರಾರ್ಥ ತಿಳಿಯದೆ ಪೆಚ್ಚಾದರು. ಸ್ವಾಮೀಜಿಯವರು ಮಂದಹಾಸದಿಂದ ಮೌನವಾಗಿಯೇ ಕುಳಿತಿದ್ದರು.
ನೆರೆದ ಜನರಲ್ಲಿ ಒಬ್ಬನು ಎದ್ದು ನಿಂತು ‘ಅದು ಹೇಗೆ ಸ್ವಾಮೀಜಿ ಫೋಟೊದ ಮೇಲೆ ಉಗಿಯಲು ಸಾಧ್ಯ?’ ಎಂದನು.
ಆಗ ವಿವೇಕಾನಂದರು ರಾಮಚಂದ್ರನಿಗೆ ಫೋಟೋದ ಮೇಲೆ ಉಗಿಯಲು ಹೇಳಿದರು. ಅವರೂ ಅದು ಸಾಧ್ಯವೇ ಇಲ್ಲ ಸ್ವಾಮೀಜಿ’ ಎಂದು ವಿನಮ್ರತೆಯಿಂದ ನುಡಿದರು.
ಆಗ ವಿವೇಕಾನಂದರು ‘ರಾಜರೇ, ಪ್ರಜೆಗಳಿಗೆ ನಿಮ್ಮ ಮೇಲೆ ಗೌರವ ಇದೆ. ಪ್ರೀತಿ ಇದೆ. ಆದ್ದರಿಂದ ನಿಮ್ಮ ಫೋಟೋದ ಮೇಲೆ ಉಗಿಯಲಾರರು. ಚಿತ್ರದಲ್ಲಿ ವಾಸ್ತವವಾಗಿ ನೀವು ಇಲ್ಲ. ಆದರೂ ಚಿತ್ರದಲ್ಲಿ ನೀವು ಇದ್ದೀರಿ ಎಂದು ನಂಬಿಕೊಂಡು ಆ ಚಿತ್ರದ ಮೇಲೆ ಯಾರೂ ಉಗಿಯಲು ತಯಾರಿಲ್ಲ. ನಾನು ಹೇಳಿದ ಈ ಮಾತು ಮೂರ್ತಿಗೂ ಅನ್ವಯಿಸುತ್ತದೆ.
ಮೂರ್ತಿ ಪೂಜೆ ಮಾಡುವವನಿಗೆ ನಿಜವಾದ ಪ್ರೇಮ ಭಗವಂತದ ಮೇಲೆ ಇರುತ್ತದೆ. ಎಲ್ಲಾ ಸ್ಥಳಗಳಲ್ಲೂ ಇರುವ ಭಗವಂತ ಮೂರ್ತಿಯಲ್ಲೂ ನೆಲೆಸಿರುತ್ತಾನೆ. ಅದನ್ನು ಅರಿತುಕೊಳ್ಳಲು ಪರಿಶುದ್ಧವಾದ ನಂಬಿಕೆ ಇರಬೇಕು. ಯಾವುದಕ್ಕೂ ನಂಬಿಕೆ ಮುಖ್ಯ’ ಎಂದು ಮೂರ್ತಿ ಪೂಜೆಯನ್ನು ಅನುಮೋದಿಸಿದರು.
ರಾಜಾ ಮಂಗಳಸಿಂಹರು ಸ್ವಾಮೀಜಿಯವರ ಕಾಲಿಗೆ ಬಿದ್ದರು. ಅವರು ‘ಸ್ವಾಮೀಜಿ ನನ್ನ ಸಂಶಯವನ್ನು ದೂರ ಮಾಡಿದ್ದೀರಿ. ನಂಬಿಕೆಯ ದೀಪವನ್ನು ನನ್ನಲ್ಲಿ ಹಚ್ಚಿದಿರಿ. ಶಾಶ್ವತ ಸತ್ಯದ ಅರಿವನ್ನು ನನಗೆ ದೊರಕಿಸಿ ಕೊಟ್ಟಿರಿ’ ಎಂದು ನುಡಿದಾಗ ರಾಜನ ಕಣ್ಣುಗಳು ಹನಿಗೂಡಿದ್ದವು.
ಕೃಪೆ: ಜಯಲಕ್ಷ್ಮಿ, ವಿಟ್ಲ (ಸಾಮಾಜಿಕ ಜಾಲತಾಣ)