ದೊಡ್ಡಬಳ್ಳಾಪುರ: ರಸ್ತೆಯಲ್ಲಿ ಸಾಗುವಾಗ ಯಾವುದಾದರೂ ತಾಲೂಕು ಮಟ್ಟದ ನಗರ ಬಂದರೆ ಸ್ವಾಗತ ಕೋರಲು ಸ್ವಾಗತ ಕಮಾನುಗಳು ಪ್ರಯಾಣಿಕರ ಗಮನ ಸೆಳೆಯುತ್ತವೆ. ಆದರೆ ವಿಪರ್ಯಾಸ ನಮ್ಮ ದೊಡ್ಡಬಳ್ಳಾಪುರಕ್ಕೆ (Doddaballapura) ರಾಜ್ಯ ಹೆದ್ದಾರಿ ಮೂಲಕ ಬರುವ ಪ್ರಯಾಣಿಕರನ್ನು ಕಸದ ತ್ಯಾಜ್ಯ ಗುಡ್ಡೆಗಳು ಸ್ವಾಗತ ಕೋರುತ್ತಿವೆ.
ಯಲಹಂಕ ಹಿಂದೂಪರ ನಡುವಿನ ರಾಜ್ಯ ಹೆದ್ದಾರಿ ದೊಡ್ಡಬಳ್ಳಾಪುರ ಮೂಲಕ ಹಾದು ಹೋಗಿದೆ. ಆದರೆ ಈ ರಾಜ್ಯ ಹೆದ್ದಾರಿಯ ಬದಿಯ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ನಿರ್ಮಾಣಗೊಂಡು, ಆಕ್ಷೇಪಣೆಗೆ ಕಾರಣವಾಗಿದೆ.
ಯಲಹಂಕ ಮೂಲಕ ದೊಡ್ಡಬಳ್ಳಾಪುರ ಬರುವ ಮಾರಸಂದ್ರ ನಂತರದ ರಸ್ತೆಯಲ್ಲಿ ಬದಿಯಲ್ಲಿ ಬೇಕಾಬಿಟ್ಟಿ ತ್ಯಾಜ್ಯವನ್ನು ಎಸೆಯಲಾಗಿದ್ದು, ಬೆಂಗಳೂರಿನಿಂದ ಬರುವವರು ದೊಡ್ಡಬಳ್ಳಾಪುರ ಬಂತು ಎನ್ನಲು ಈ ತ್ಯಾಜ್ಯ ಸಾಕ್ಷಿ ಗುಡ್ಡೆ ಎಂಬಂತೆ ಲೇವಡಿ ಮಾಡುತ್ತಿದ್ದಾರೆ.
ಇನ್ನೂ ಹಿಂದೂಪುರದಿಂದ ದೊಡ್ಡಬಳ್ಳಾಪುರ ಬರುವ ರಸ್ತೆಯ ಕಂಟನಕುಂಟೆ ಬಳಿಕ ಸಿಗುವ ಕೆರೆ ಕಟ್ಟೆ ಆಂಜನೇಯನ ಸ್ವಾಮಿ ದೇವಾಲಯದ ತಿರುವಿನ ಸ್ವಲ್ಪ ದೂರದಲ್ಲಿ ಕಸದ ರಾಶಿ ಹಾಕಲಾಗುತ್ತಿದ್ದು, ಇಲ್ಲಿ ಬೀದಿ ನಾಯಿಗಳ ಉಪಟಳವು ಹೆಚ್ಚಾಗಿದ್ದು, ಈ ರಸ್ತೆಯಲ್ಲಿ ಬರುವವರ ಅಪಘಾತಕ್ಕೆ ಕಾರಣವಾಗುತ್ತಿವೆ.
ಉಳಿದಂತೆ ಮುತ್ತೂರಿನ ಬಳಿಯಿಂದ ಡಿ ಮಾರ್ಟ್ ರಸ್ತೆಯಲ್ಲಿ ಒಳ ಚರಂಡಿ ತ್ಯಾಜ್ಯ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿಯೇ ಹರಿಯುತ್ತಿದ್ದು, ಇದೇ ರಸ್ತೆಯಲ್ಲಿ ಓಡಾಡುವ ಅಧಿಕಾರಿಗಳು, ಚುನಾಯಿತ ಜನಪ್ರತಿನಿದಿಗಳಿಗೆ ಕಣ್ಣಿದ್ದು ಕಾಣದಾಗಿ ಎಂಬ ಆಕ್ರೋಶ ವ್ಯಾಪಕವಾಗಿ, ಇತರೆ ತಾಲೂಕಿನ, ರಾಜ್ಯಗಳ ಜನರೆದು ದೊಡ್ಡಬಳ್ಳಾಪುರ ತಾಲೂಕಿನ ಜನತೆ ತಲೆತಗ್ಗಿಸುವಂತಾಗಿದೆ.
ಈಗಾಗಲೇ MSGP ಎಂಬ ಬಿಬಿಎಂಪಿ ತ್ಯಾಜ್ಯ ಭೂತ ದೊಡ್ಡಬಳ್ಳಾಪುರ ತಾಲೂಕನ್ನು ಕಸದ ತೊಟ್ಟಿ ಎಂಬಂತೆ ಮಾಡಿದೆ. ಇದರ ಬೆನ್ನಲ್ಲೇ ನಗರಕ್ಕೆ ಸಂಪರ್ಕಿಸುವ ಪ್ರಮುಖ ಎರಡು ರಾಜ್ಯ ಹೆದ್ದಾರಿಯಲ್ಲಿನ ತ್ಯಾಜ್ಯದ ಗುಡ್ಡೆಗಳು, ರಸ್ತೆ ನಡುವೆ ಹರಿಯುತ್ತಿರುವ ತ್ಯಾಜ್ಯ ನೀರು ದೊಡ್ಡಬಳ್ಳಾಪುರದ ಹಿರಿಮೆಗೆ ಕಪ್ಪುಚುಕ್ಕೆಯಂತಾಗಿದೆ ಎಂದು ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಬೇಸರ ವ್ಯಕ್ತಪಡಿಸಿದ್ದಾರೆ.