ಆನೇಕಲ್: ಹಸುಗೂಸನ್ನು ನೀರಿನ ಸಂಪ್ ಟ್ಯಾಂಕ್‌ಗೆ ಎಸೆದು ಸಾವಿಗೆ ಕಾರಣ ವಾಗಿರುವ ಹೃದಯ ವಿದ್ರಾವಕ ಘಟನೆ ಆನೇಕಲ್ ಸಮೀಪದ ಇಗ್ಗಲೂರಿನ ಸೂರ್ಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
33 ದಿನದ ಹಸುಗೂಸನ್ನು ಮನೆಯ ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಮನು ಮತ್ತು ಹರ್ಷಿತಾ ಪ್ರೀತಿಸಿ ಮದುವೆಯಾದ ದಂಪತಿಗಳು. ಹರ್ಷಿತಾ ಗರ್ಭಿಣಿಯಾದಾಗ ದಂಪತಿಗಳ ನಡುವೆ ವೈಮನಸ್ಸು ಮೂಡಿತ್ತು. 7 ತಿಂಗಳಿಗೇ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು.
ಅವಧಿ ಪೂರ್ವ ಶಿಶು ಜನನವಾದ ಕಾರಣ ಮಗುವಿನ ಬೆಳವಣಿಗೆಯಲ್ಲಿ ನ್ಯೂನತೆ ಕಂಡು ಬಂದು ಉಸಿರಾಟದ ತೊಂದರೆಗಾಗಿ ಅಪಾರ ಹಣ ಖರ್ಚು ಮಾಡಿ ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿತ್ತು. ಮಗು ಸಂಪೂರ್ಣ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವಾರದ ಹಿಂದೆಯಷ್ಟೇ ಮನೆಗೆ ಕರೆತರಲಾಗಿತ್ತು.
ಮಂಗಳವಾರ ಬೆಳಗ್ಗೆ ತಾಯಿ ಶೌಚಾಲಯಕ್ಕೆ ಹೋದಾಗ ಮಗು ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಗಾಬರಿಯಾಗಿ ಅಲ್ಲೆಲ್ಲಾ ಹುಡುಕಾಡಿದರು ಮಗು ಪತ್ತೆಯಾಗಿರಲಿಲ್ಲ.
ಕೂಡಲೇ ಸೂರ್ಯನಗರ ಪೊಲೀಸರಿಗೆ ದೂರು ನೀಡಲಾಗಿ ಪರಿಶೀಲನೆ ವೇಳೆ ಮನೆಯ ಸಿಂಟೆಕ್ಸ್ ನೀರಿನ ಟ್ಯಾಂಕ್ ನಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಅಂತರ್ಜಾತಿ ವಿವಾಹದ ವೈಷಮ್ಯಕ್ಕೆ ಮಗುವಿನ ಕೊಲೆ ಯಾಗಿರಬಹುದಾ ಎಂಬ ಅನುಮಾನ ಮೂಡಿದೆ.