ಬೆಂಗಳೂರು: ಸಾರಿಗೆ ಬಸ್ ಚಾಲನೆ ಮಾಡುವಾಗಲೇ ಚಾಲಕನಿಗೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ನಡೆದಿದೆ.
ನೆಲಮಂಗಲದಿಂದ ದಾಸನಪುರ ಮಾರ್ಗವಾಗಿ ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗ 40 ವರ್ಷದ ಬಸ್ ಚಾಲಕ ಕಿರಣ್ ಕುಮಾರ್ ಅವರು ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಸ್ ಚಾಲಕ ಕಿರಣ್ ಡ್ರೈವರ್ ಸೀಟ್‌ನಲ್ಲಿ ಕುಳಿತುಕೊಂಡಿದ್ದಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವೇಳೆ ಬಸ್ ಮತ್ತೊಂದು ಬಿಎಂಟಿಸಿ ಬಸ್ ಅನ್ನು ಘರ್ಷಿಸಿ, ಹಿಂದಿಕ್ಕಿ ಮುಂದೆ ಹೋಗಿದೆ.
ತಕ್ಷಣ ಕಂಡಕ್ಟರ್ ಮುಂದೆ ಬಂದು, ಕಿರಣ್ ಕುಮಾರ್ ಅವರನ್ನು ಸೀಟಿನಿಂದ ಪಕ್ಕಕ್ಕೆ ಎಳೆದು ಕೂರಿಸಿ ನಂತರ ಬಸ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ನಿಲ್ಲಿಸಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಕಂಡಕ್ಷರ್ ತಕ್ಷಣ ಸ್ಪಂದಿಸಿದ್ದರಿಂದ ಹಲವು ಪ್ರಯಾಣಿಕರ ಪ್ರಾಣ ಇಂದು ಉಳಿದಿದೆ.
ನಂತರ ಓಬಳೇಶ್ ಅವರು ಕಿರಣ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಹಠಾತ್ ಹೃದಯಾಘಾತದಿಂದ ಡಿಪೋ 40ರ ಚಾಲಕ ಕಿರಣ್ ಕುಮಾರ್ ಮೃತಪಟ್ಟಿರುವುದಕ್ಕೆ ಬಿಎಂಟಿಸಿ ದುಃಖ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದೆ.