ಗುರಪುರದಲ್ಲಿ ಅಂದು ಹಬ್ಬದ ದಿನ. ಮಳೆ-ಬೆಳೆ ಉತ್ತಮವಾಗಿ ಆಗಿದುದ್ದರಿಂದ ಎಲ್ಲಾರ ಮೊಗದಲ್ಲಿ ಸಂತೃಪ್ತಿ ತುಂಬಿತ್ತು. ಊರಿನ ಜನರೆಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು-ತೋರಣಗಳಿಂದ ಶೃಂಗಾರ ಮಾಡಿದ್ದರು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿದ್ದರು. ಬಗೆಬಗೆಯ ವಿಶೇಷ ಅಡುಗೆ ಎಲ್ಲರ ಮನೆಗಳಲ್ಲಿ ತಯಾರಾಗುತ್ತಿತ್ತು. ಘಮಘಮ ಪರಿಮಳ ಎಲ್ಲೆಡೆ ಹರಡಿತ್ತು.
ಇದನ್ನೇಲ್ಲ “ನೀರು ಗಮನಿಸುತ್ತಿತ್ತು. “ಊರಿನ ಸಂಭ್ರಮಕ್ಕೆ ನಾನೇ ಕಾರಣ. ಇದನ್ನು ನನ್ನ ಸ್ನೇಹಿತರಿಗೆ ಈಗಲೇ ಹೇಳಬೇಕು” ಎಂದು ಜಂಬದಿಂದ ಬೀಗಿತು. ಗೆಳೆಯರಾದ ಗಾಳಿ, ಆಹಾರ, ಉಡುಪು ಮತ್ತು ಮನೆಗಳನ್ನು ಕರೆಯಿತು. ಎಲ್ಲವೂ ಊರಿನ ಚಾವಡಿಯಲ್ಲಿ ಸಭೆ ಸೇರಿದವು. “ನೀರು” ಸ್ನೇಹಿತರಿಗೆ ಸ್ವಾಗತ ಕೋರಿ ಮಾತು ಪ್ರಾರಂಭಿಸಿತು.
ನೀರು: ಗೆಳೆಯರೇ, ಇಂದು ನಮ್ಮ ಊರಿನಲ್ಲಿ ಎಲ್ಲೆಡೆ ನೋಡಿದರೂ ಹಬ್ಬದ ಸಡಗರ. ಇದಕ್ಕೆ ಕಾರಣ ಯಾರು ಗೋತ್ತೇ? ಅದು ನಾನೇ!
ಮನೆ: ನೀನಾ! ಹೇಗೆ ಕಾರಣವಾಗುತ್ತಿಯಾ ಮಿತ್ರ?
ನೀರು: ಜೀವಿಗಳು ನೀರು ಕುಡಿಯದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಮನೆಗಳನ್ನು ಸ್ವಚ್ಛಗೊಳಿಸಲು ನಾನು ಬೇಕು. ಸ್ನಾನ ಮಾಡಲು, ಬಟ್ಟೆ ಹೊಗಿಯಲು, ನಾನಿರಲೇಬೇಕು. ಬಗೆಬಗೆಯ ಅಡುಗೆ ತಯಾರಿಸಲು, ದವಸಧಾನ್ಯ ಬೆಳೆಯಲು ಬೇಕು. ವಿಧ್ಯುತ್ ಉತ್ಪಾದಿಸಲು ನಾನೇ ಬೇಕು. ಈ ಎಲ್ಲಾ ಕಾರಣಗಳಿಂದ ನಾನೇ ಹೆಚ್ಚು. ಇದನ್ನು ನೀವೆಲ್ಲರೂ ಒಪ್ಪಿವಿರಿ ತಾನೇ?
ಆಹಾರ: ನಾನು ಒಪ್ಪುವುದಿಲ್ಲ ಗೆಳೆಯ. ಜೀವಿಗಳು ಒಂದು ಹೊತ್ತು ಆಹಾರ ಸೇವಿಸದಿದ್ದರೆ ಸುಸ್ತಾಗಿ ಬಿದ್ದು ಹೋಗುತ್ತವೆ. ಜೀವಿಗಳ ಬೆಳವಣಿಗೆಗೆ ನಾನು ಬೇಕು. ಅವುಗಳಿಗೆ ಶಕ್ತಿ ಬೇಕಾದರೆ, ರೋಗರುಜಿನಗಳಿಂದ ರಕ್ಷಣೆ ಪಡೆಯಬೇಕಾದರೆ ಪೌಷ್ಠಿಕ ಆಹಾರ ಬೇಕು. ನಾನಿಲ್ಲದಿದ್ದರೇ ಇಂದಿನ ಹಬ್ಬವೇ ನಡೆಯುವುದಿಲ್ಲ; ಗೋತ್ತಾ?
ಮನೆ: ಸ್ನೇಹಿತರೇ, ಜೀವಿಗಳು ಕತ್ತಲಾಗುತ್ತಲೇ ತಮ್ಮ ವಾಸಸ್ಥಾನವಾದ ಮನೆ, ಗೂಡು, ಗುಹೆ, ಪೊಟರೆ, ಬಿಲಗಳಿಗೆ, ಓಡೋಡಿ ಬರುತ್ತವೆ. ನಾನು ಅವುಗಳಿಗೆ ಆಶ್ರಯ ನೀಡುತ್ತೇನೆ. ಮಳೆ, ಗಾಳಿ, ಕಳ್ಳರು, ಶತ್ರುಗಳಿಂದ ರಕ್ಷಣೆ ನೀಡುತ್ತೇನೆ. ಅವುಗಳ ವಂಶಾಭಿವೃದ್ಧಿಗೆ ಬೇಕಾದ ಮೊಟ್ಟೆ ಮತ್ತು ಮರಿಗಳನ್ನು ಜೋಪಾನ ಮಾಡುತ್ತೇನೆ. ಈ ಗುರುಪುರದ ಮನೆಗಳನ್ನೇ ನೋಡಿ! ಇವೆಲ್ಲವನ್ನು ನೋಡಿದರೆ ನಿಮಗೆ ನಾನೇ ಹೆಚ್ಚು ಅನಿಸುವುದಿಲ್ಲವೇ?
ಉಡುಪು: ಅಯ್ಯಾ ಮಿತ್ರರೇ ನಿಮ್ಮ ಮಾತುಗಳನ್ನು ಕೇಳಿ ನನಗೆ ನಗು ಬರುತ್ತದೆ. ಅಂಗಳದಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ರೇಷ್ಮೆ ಲಂಗ ರವಿಕೆ ತೊಟ್ಟು ಮೊಗ್ಗಿನ ಜಡೆ, ಕೈತುಂಬಾ ಬಳೆ, ಕಾಲಿಗೆ ಗೆಜ್ಜೆ, ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು ಮುದ್ದಾಗಿ ಕಾಣುತ್ತಿವೆ. ಊರಿನ ಮನೆ ಮಂದಿಯೆಲ್ಲಾ ತಮಗೊಪ್ಪವ ಉಡುಪುಗಳನ್ನು ಧರಿಸಿ ಹಬ್ಬ ಆಚರಿಸುತ್ತಿದ್ದಾರೆ. ಒಂದು ವೇಳೆ ಇವರಿಗೆ ಉಡುಪು ಇಲ್ಲದೇ ಇರುತ್ತಿದ್ದರೇ? – ಈಗ ಅರ್ಥವಾಯಿತೇ ಇವರೆಲ್ಲರ ಸಂತೋಷಕ್ಕೆ ನಾನೇ ಕಾರಣ?
ಇವರ ಮಾತುಗಳನ್ನು ಕೇಳಿಸಿಕೊಂಡ ಗಾಳಿಯು ಹುಸಿನಗೆ ಬೀರುತ್ತಾ,
ಅಣ್ಣಂದಿರೇ, ನಿಮ್ಮ ಮಾತು ಸತ್ಯ. ಜೀವಿಗಳು ಈ ಭೂಮಿಯ ಮೇಲೆ ಬದುಕಲು ಸುಖ ಸಂತೋಷದಿಂದಿರಲು ನೀವೆಲ್ಲರೂ ಬೇಕೆ ಬೇಕು. ಆದರೆ, ಜೀವಿಗಳು ಉಸಿರಾಡಲು ಗಾಳಿ ಇಲ್ಲದಿದ್ದರೇ ಏನು ಗತಿ ಹೇಳಿ? ಗಿಡಮರಗಳು ಬದುಕುತ್ತವೆಯೇ? ಜೀವಿಗಳ ಉಸಿರಾಟ ಅರೆಕ್ಷಣ ನಿಂತರೆ ಏನಾಗುತ್ತದೆ..? ನಾವೆಲ್ಲರೂ ನಮ್ಮ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ. ಈ ಜಗತ್ತಿನ ಪ್ರತಿಯೊಂದು ವಸ್ತು, ಜೀವಿಗಳಲ್ಲಿ ಪರಸ್ಪರ ವ್ಯತ್ಯಾಸವಿದೆ. ಆದರೆ, ಅದರ ಎಲ್ಲವೂ ಸಮಾನ.
ನೀರು, ಆಹಾರ, ಮನೆ, ಉಡುಪು ಮತ್ತು ಗಾಳಿಯ ಮಾತುಗಳನ್ನು ಸನಿಹದಲ್ಲೇ ಕುಳಿತಿದ್ದ “ವಿದ್ಯೆ” ಒಪ್ಪಿಕೊಂಡು ತಲೆದೂಗಿತು. ಸ್ನೇಹಿತರ ಮಾತುಗಳನ್ನು ತನ್ನ ಒಂದು ಮಾತನ್ನು ಸೇರಿಸಿತು.
ವಿದ್ಯೆ: ಗೆಳೆಯರೇ, “ತುಂಬಿದ ಕೂಡ ತುಳುಕುವುದಿಲ್ಲ” ಎಂಬ ಮಾತನ್ನು ನೀವೆಲ್ಲ ಕೇಳಿದ್ದೀರಲ್ಲ. ಅಂತೆಯೇ ಎಲ್ಲರೂ ವಿದ್ಯಾವಂತರಾಗಬೇಕು. ಆಗ ನಮ್ಮ ಬಾಯಿಂದ ಯಾವುದೇ ಅಹಂಕಾರದ ಮಾತುಗಳು ತುಳುಕಲಾರವು. ಆದ್ದರಿಂದ ನಾನು ಹೇಳುವುದು ಒಂದೆ: ಎಲ್ಲರೂ ವಿದ್ಯಾವಂತರಾಗೋಣ. ಸಮಾನತೆಯಿಂದ ಬದುಕೋಣ.
ಎಲ್ಲರೂ “ಹೌದು, ಹೌದು” ಎಂದು ಹೇಳುತ್ತಾ ಕೈಕೈ ಹಿಡಿದುಕೊಂಡು ಹಬ್ಬದ ಸಡಗರದಲ್ಲಿ ಪಾಲುಗೊಂಡವು.
ಸಂಗ್ರಹ: 3ನೇ ತರಗತಿ ಪುಸ್ತಕ