ಬಳ್ಳಾರಿ: ವಕ್ಫ್ ಪ್ರತಿಭಟನೆ ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯ ಗೆಲುವಿನ ತಂತ್ರವಾಗಿ ನಡೆಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ರೈತರ ಆಸ್ತಿಗಳಿಗೆ ವಕ್ಫ್ ಮಂಡಳಿ ನೀಡಿರುವ ನೋಟೀಸ್ ವಿರುದ್ಧ ಕರೆ ನೀಡಲಾಗಿರುವ ರಾಜ್ಯಾದ್ಯಂತ ಪ್ರತಿಭಟನೆ ಹಿನ್ನೆಲೆಯಲ್ಲಿ ಬಳ್ಳಾರಿ ನಗರದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಿಜಾಮರ ಕಾಲದಲ್ಲಿ ರಜಾಕಿಗಳು ಜನರನ್ನು ಲೂಟಿ ಮಾಡುತ್ತಿದ್ದರು. ಅದೇ ರೀತಿ ರೈತರ 15 ಸಾವಿರ ಎಕರೆಯಷ್ಟು ಜಮೀನನ್ನು ಕಸಿಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಸರ್ಕಾರದ ಈ ನಡೆ ವಿರುದ್ಧ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ ಎಂದರು.
ಜಮೀರ್ ಎಂಬ ದೇಶದ್ರೋಹಿ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳನ್ನು ಬೆದರಿಸಿ ರೈತರ ಜಮೀನುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ವಿರಕ್ತ ಮಠದ ಜಮೀನು ವಕ್ಸ್‌ಗೆ ಹೋಗುವಂತಾಗಿದೆ. ಕೊಪ್ಪಳದಲ್ಲಿ ದಲಿತರ ಜಮೀನು ಕಬಳಿಸಲಾಗುತ್ತಿದೆ. ಕಲಬುರಗಿಯ ಸವಳೇಶ್ವರ ಗ್ರಾಮದ ಬೀರೇಶ್ವರ ದೇಗುಲದ ಜಮೀನನ್ನು ವಕ್ಸ್ ಆಸ್ತಿ ಎಂದು ಗುರುತಿಸಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಮತ್ತು ಜಮೀರ್ ಕಾರಣ ಎಂದರು.
ವಕ್ಸ್ ತಿದ್ದುಪಡಿ ಕಾಯಿದೆ ಸಂಸದೀಯ ಸಮಿತಿಯ ಮುಂದೆ ಇದೆ. ಪ್ರಧಾನಿ ನರೇಂದ್ರ ಮೋದಿ ಏನಾದರೂ ಈ ಕಾನೂನು ಜಾರಿಗೆ ತಂದರೆ, ರೈತರಿಂದ ಜಮೀನು ಪಡೆಯುವುದು ಕಷ್ಟ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.