Site icon ಹರಿತಲೇಖನಿ

ಚುನಾವಣೆ ಇದ್ದಾಗ ಮಾತ್ರ ಕುಮಾರಸ್ವಾಮಿಗೆ ಕಣ್ಣೀರು.. ಜನರು ಕಣ್ಣೀರು ಹಾಕಿದಾಗ ಎಲ್ಲಿಗೆ ಹೋಗಿದ್ದರು?: ಡಿಕೆ ಶಿವಕುಮಾರ್

ಮಂಗಳೂರು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕಣ್ಣೀರು ಬರುವುದು ಚುನಾವಣೆ ಇದ್ದಾಗ ಮಾತ್ರ. ಚನ್ನಪಟ್ಟಣದ ಜನರು ಕಣ್ಣೀರು ಹಾಕಿದಾಗ ಅವರು ಎಲ್ಲಿಗೆ ಹೋಗಿದ್ದರು? ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು, ಮಾತನಾಡಿದ ಕಾಂಗ್ರೆಸ್ ನಾಯಕರಿಗೆ ಮನುಷ್ಯತ್ವವಿಲ್ಲ. ತಾವು ಭಾವುಕ ಜೀವಿ, ಹೀಗಾಗಿ ಕಣ್ಣೀರು ಹಾಕುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ, ಚನ್ನಪಟ್ಟಣದಿಂದ ಆರಿಸಿ ಹೋದ ಅವರು ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲೂ ಬರಲಿಲ್ಲ ಎಂದು ಛೇಡಿಸಿದರು.

ಚನ್ನಪಟ್ಟಣದ ಜನರ ಅಭಿವೃದ್ಧಿಗೆ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? ಕುಮಾರಸ್ವಾಮಿ ಅಲ್ಲಿನ ಯಾವ ಕೆರೆಗೆ ನೀರು ತುಂಬಿಸಿದ್ದಾರೆ? ಚನ್ನಪಟ್ಟಣ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಿದ್ದು ಯೋಗೇಶ್ವರ್. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕ್ಷೇತ್ರಕ್ಕೆ ಸಣ್ಣ ಕೆಲಸವನ್ನೂ ಮಾಡಿಲ್ಲ ಎಂದು ಟೀಕಿಸಿದರು.

ಕೇವಲ ಶಾಸಕರಾಗಿದ್ದಾಗ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಕುಮಾರಸ್ವಾಮಿ ಅನುದಾನ ತಂದು ಕೆಲಸ ಮಾಡಬೇಕಿತ್ತಲ್ಲವೇ? ಏಕೆ ಮಾಡಲಿಲ್ಲ? ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ, ರಾಮನಗರದಲ್ಲಿ ಪತ್ನಿ ಪ್ರತಿನಿಧಿಸಿದ್ದರು. ನಿಖಿಲ್‌ಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ಅವರು ಮಂಡ್ಯ ಹಾಗೂ ರಾಮನಗರದಲ್ಲಿ ಸೋತಿದ್ದಾರೆ ಎಂದರು.

ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂದು ಹೇಳಬೇಕು. ಯೋಗೇಶ್ವರ್ ಪಕ್ಷಾಂತರಿ ಇರಬಹುದು. ಕಾಂಗ್ರೆಸ್‌ನಲ್ಲಿ ಇದ್ದವರು. ಸಮಾಜವಾದಿ ಪಕ್ಷ, ಬಿಜೆಪಿ ಪಕ್ಷಕ್ಕೆ ಹೋಗಿದ್ದರು. ಎನ್‌ಡಿಎ ಮೈತ್ರಿ ಸರಿಯಿಲ್ಲ, ಕುಮಾರಸ್ವಾಮಿ ಸರಿಯಿಲ್ಲ. ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದಿಂದ ಒಳ್ಳೆಯದಾಗಲಿದೆ ಎಂದು ಮೇಲ್ಮನೆ ಸದಸ್ಯತ್ವ ತೊರೆದು ಮತ್ತೆ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ ತಾಲ್ಲೂಕಿನ ಜನ ವಿದ್ಯಾವಂತರು, ಪ್ರಜ್ಞಾವಂತರಿದ್ದಾರೆ. ನಮ್ಮ ಸರ್ಕಾರ ಅವರ ಸೇವೆ ಮಾಡಲು ಮನೆ ಬಾಗಿಲಿಗೆ ಹೋಗಿದೆ. 22 ಸಾವಿರ ಜನ ತಮ್ಮ ಕಷ್ಟವನ್ನು ನಮ್ಮ ಬಳಿ ಹೇಳಿಕೊಂಡಿದ್ದಾರೆ. ನೂರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗಿವೆ.

ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ

ಬಡವರಿಗೆ ನಿವೇಶನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು. ನಮ್ಮ ಸರ್ಕಾರದಲ್ಲಿ ರಾಜ್ಯದ ಎಲ್ಲಾ ವರ್ಗದ ಜನರಿಗೆ ಐದು ಗ್ಯಾರಂಟಿ ಯೋಜನೆ ನೀಡುತ್ತಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಜನತಾದಳದಲ್ಲಿ ಭವಿಷ್ಯವಿಲ್ಲ ಎಂದು ಅನೇಕ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ ಎಂದು ಅವರು ಪ್ರಸ್ತಾಪಿಸಿದರು.

ಚುನಾವಣೆ ಹಿನ್ನೆಲೆ ಗ್ಯಾರಂಟಿ ಟೀಕೆ ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಅವರ ಟೀಕೆ ಬಗ್ಗೆ ಕೇಳುದಾಗ, ಅವರು ಚುನಾವಣೆಗಾಗಿ ಏನು ಬೇಕಾದ್ರೂ ಹೇಳಲಿ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಹೊಟ್ಟೆ ತುಂಬಿಸಿ, ಬದುಕು ಕಟ್ಟುತ್ತಿವೆ. ಆಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಶಿವಕುಮಾ‌ರ್ ಬಣ್ಣಿಸಿದರು.

ಆರ್ಥಿಕವಾಗಿ ಸಬಲವಾಗಿರುವವರು ದೊಡ್ಡ ಕಂಪನಿಯ ಉದ್ಯೋಗಸ್ಥ ಮಹಿಳೆಯರು ನಮಗೆ ಸಾರಿಗೆ ಭತ್ಯೆ ಸಿಗುತ್ತಿದೆ, ನಮಗೆ ಶಕ್ತಿ ಯೋಜನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ನಾನು ಹೇಳಿದ್ದೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಯನ್ನು ನಾವು ಮಂಗಳೂರಿನಲ್ಲೇ ಘೋಷಣೆ ಮಾಡಿದ್ದು, ಇದನ್ನು ನಿಲ್ಲಿಸುವುದಿಲ್ಲ. ಮುಂದಿನ ಅವಧಿಯ ಐದು ವರ್ಷವೂ ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ವೃದ್ದಾಪ್ಯ ವೇತನ, ವಿಧವಾ ಪಿಂಚಣಿ, ಉಳುವವನಿಗೆ ಭೂಮಿ, ಬಡವರಿಗೆ ನಿವೇಶನ, ಮನೆ ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದು ನಮ್ಮ ಪಕ್ಷ ಎಂದರು.

ಈ ಯೋಜನೆಗಳು ಇಂದಿಗೂ ಜಾರಿಯಲ್ಲಿವೆ. ಯಾವುದನ್ನೂ ನಾವು ಹಿಂಪಡೆದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಮ್ಮ ಕಾರ್ಯಕ್ರಮ ನಿಲ್ಲಿಸಲು ಆಗಿಲ್ಲ. ನಮ್ಮ ಕಾರ್ಯಕ್ರಮಗಳು ಬದುಕು ಕಟ್ಟುವ ಕಾರ್ಯಕ್ರಮ. ಬಿಜೆಪಿಯವರು ಕೇವಲ ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಗ್ಯಾರಂಟಿ ನಕಲು ಮಾಡುದ ಬಿಜೆಪಿ

ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಸರಣಿ ಟ್ವಿಟ್ ಮಾಡಿದ್ದಾರೆ. ಅವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ಮಧ್ಯಪ್ರದೇಶ, ಹರಿಯಾಣದಲ್ಲೂ ಘೋಷಣೆ ಮಾಡಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ಘೋಷಣೆ ಮಾಡುತ್ತಿದ್ದಾರೆ. ನಮ್ಮ ಯೋಜನೆ ನಕಲು ಮಾಡುತ್ತಿರುವುದಕ್ಕೆ ಅವರಿಗೆ ಮುಜುಗರವಾಗುತ್ತಿದೆ. ಹೀಗಾಗಿ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

Exit mobile version