ಚಿಕ್ಕಮಗಳೂರು: ದ್ವಿಚಕ್ರ ವಾಹನಕ್ಕೆ ಬೀದಿನಾಯಿ ಅಡ್ಡಬಂದ ಪರಿಣಾಮ ಅಪಘಾತ (Accident) ಸಂಭವಿಸಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪಟ್ಟಣದಲ್ಲಿ ನಡೆದಿದೆ.
ಗೋಣಿಬೀಡು ಸಮೀಪದ ಆನೆದಿಬ್ಬ ನಿವಾಸಿ 24 ವರ್ಷದ ಜಾಫರ್ ಮೃತಪಟ್ಟ ಯುವಕ.
ತಾನು ಕೆಲಸ ಮಾಡಿದ್ದ ಹಣವನ್ನು ಪಡೆಯಲು ಸಮೀಪದ ಬೆಟ್ಟದಮನೆಯ ಗ್ರಾಮಕ್ಕೆ ಹೋಗಿ ವಾಪಾಸಾಗುತ್ತಿದ್ದ ವೇಳೆ ಗೋಣಿಬೀಡು ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಯೊಂದು ಬೈಕಿಗೆ ಅಡ್ಡಬಂದಿದೆ. ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಚರಂಡಿಗೆ ಉರುಳಿಬಿದ್ದಿದೆ (Accident).
ಈ ಸಂದರ್ಭ ಚರಂಡಿಗೆ ಅಳವಡಿಸಿದ್ದ ಸಿಮೆಂಟ್ ಚಪ್ಪಡಿಗಳಿಗೆ ಜಾಫರ್ ತಲೆ ಹೊಡೆದಿದ್ದು, ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಬೀದಿನಾಯಿ ಕೂಡ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.