ಬೆಂಗಳೂರು: ಬೆನ್ನು ನೋವಿನ ಕಾರಣದಿಂದಾಗಿ ನಟ ದರ್ಶನ್ ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಗೆ ಶುಕ್ರವಾರ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ.
ದರ್ಶನ್ ಆರೋಗ್ಯದ ಕುರಿತು ಕೆಂಗೇರಿ ಆಸ್ಪತ್ರೆಯ ವೈದ್ಯ ನವೀನ್ ಅಪ್ಪಾಜಿಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿ, ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ದರ್ಶನ್ ಶುಕ್ರವಾರ ಆಸತ್ರೆಗೆ ದಾಖಲಾಗಿದ್ದಾರೆ. ನಾವು ತಪಾಸಣೆ ಮಾಡಿದ್ದೇವೆ.
ಕಾಲು ನೋವು ಇದೆ. ಆದ್ದರಿಂದ ಬೆನ್ನು ನೋವು ಕೂಡ ಇದೆ. ಎಡಗಾಲು ದುರ್ಬಲವಾಗಿದೆ. ಆ ಕಾಲು ಆಡುವುದು ಸ್ವಲ್ಪ ಕಡಿಮೆ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬು ದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಎಂಆರ್‌ಐ, ಎಕ್ಸ್ ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ. 48 ಗಂಟೆಗಳ ಬಳಿಕ ಒಟ್ಟಾರೆ ವೈದ್ಯಕೀಯ ವರದಿ ಬರಲಿದೆ. ತಪಾಸಣೆಗೆ 24 ಗಂಟೆ ಬೇಕು. ಒಂದು ವಾರದ ಹಿಂದೆ ಮಾಡಿದ ಎಂಆರ್‌ಐ ಫಿಲ್ಡ್ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್‌ಐ ಮಾಡಬೇಕಾಗುತ್ತದೆ.
ಸದ್ಯಕ್ಕೆ ಅವರಿಗೆ ತುಂಬಾ ನೋವಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೋ, ಇಲ್ಲವೋ ಈಗಲೇ ಹೇಳಲು ಸಾಧ್ಯವಿಲ್ಲ. 24 ರಿಂದ 48 ಗಂಟೆಯ ಒಳಗೆ ಎಲ್ಲಾ ವರದಿಗಳು ಸಿಗುತ್ತವೆ. ತುಂಬಾ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.