ಒಂದು ಊರಿನಲ್ಲಿ ಕೂಲಿ ಮಾಡಿ ಬದುಕುತ್ತಿದ್ದ ವಿಧವೆಯೊಬ್ಬಳು ಮಗನಿಗೆ ಸಂಸ್ಕೃತ ಕಲಿಸಿ ದೊಡ್ಡ ವಿದ್ವಾಂಸನನ್ನಾಗಿ ಮಾಡಿಸಬೇಕು ಎಂದು ಬಯಸಿದ್ದಳು.
ಹತ್ತಿರದಲ್ಲೇ ಇರುವ ಗುರುಕುಲಕ್ಕೆ ತೆರಳಿದಳು ಆಕೆಯದು ಶೋಚನೀಯ ಪರಿಸ್ಥಿತಿಯಾಗಿದ್ದರೂ ಸಹ, ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಳು.
ಇದನ್ನು ಅರಿತ ಗುರುಗಳು ಈತನಿಗೆ ವಿದ್ಯೆ ಕಲಿಸುತ್ತೇನೆ ,ಆದರೆ ನೀವು ಶುಲ್ಕವನ್ನೇನೂ ಕೊಡುವುದು ಬೇಡ. ಅವನ ಅನ್ನ ಬಟ್ಟೆ ವಸತಿಯ ಬಗ್ಗೆ ಕುರಿತು ಚಿಂತಿಸುವ ಅಗತ್ಯವಿಲ್ಲ ,ಕಲಿಕೆಯಲ್ಲಿ ಆತ ತೋರುವ ಶ್ರದ್ಧೆಯೇ ನನಗೆ ಸಲ್ಲುವ ಗುರುದಕ್ಷಿಣೆ ಎಂದು ಭರವಸೆಯನ್ನು ಕೊಟ್ಟರು.
ಪಾಠ ಪ್ರವಚನಗಳು ಆರಂಭವಾದವು ಪ್ರಾತಃಕಾಲದಲ್ಲಿ ಬೇಗನೆ ನಿದ್ರೆಯಿಂದ ಏಳುವುದು, ಧ್ಯಾನ, ಪೂಜೆ ಮಾಡುವುದು, ಸಂಸ್ಕೃತ ಶ್ಲೋಕಗಳನ್ನು ಹೇಳುವುದು, ಸೂತ್ರ ಹೀಗೆ ಇತ್ಯಾದಿಗಳ ಕಂಠಪಾಠ ತಪ್ಪಿದರೆ, ಕಠಿಣ ಶಿಕ್ಷೆ ಗುರುಸೇವೆ ಹೀಗೆ ಅಲ್ಲಿನ ಪಾಠ ಕಲಿಸುವ ಶೈಲಿಯೇ ವಿಭಿನ್ನವಾಗಿತ್ತು.
ಈ ಪರಿಪಾಠದ ಅನುಸರಣೆ ಆ ಹುಡುಗನಿಗೆ ಕಬ್ಬಿಣದ ಕಡಲೆಯಾಗಿತ್ತು. ಸಂಸ್ಕೃತ ಕಲಿಕೆಯು ತನ್ನಿಂದಾಗದು ಎಂಬ ಗ್ರಹಿಕೆ ಬಲವಾಗ ತೊಡಗಿತ್ತು ಆ ಹುಡುಗನಿಗೆ. ಒಂದು ದಿನ ಆ ಹುಡುಗ ಹೇಳದೇ ಕೇಳದೇ ಗುರುಕುಲದಿಂದ ಹೊರಟು ಬಿಟ್ಟ. ಆತ ಮಾರ್ಗ ಮಧ್ಯದಲ್ಲಿ ಕಾಡನ್ನು ದಾಟಿ ತನ್ನ ಊರನ್ನು ಸೇರಬೇಕಿತ್ತು. ಹೀಗಾಗಿ ವಿಪರೀತ ಬಾಯಾರಿಕೆಯಾಗಿತ್ತು.
ನೀರಿಗಾಗಿ ಹುಡುಕುವಾಗ ಅಜ್ಜಿಯೊಬ್ಬಳು ಬಾವಿಯಲ್ಲಿ ನೀರು ಸೇರುತ್ತಿರುವುದನ್ನು ನೋಡಿದ, ಒಂದಿಷ್ಟು ನೀರು ಕೊಡುವಂತೆ ಆಕೆಯನ್ನು ಕೇಳಿಕೊಂಡಳು, ನೀರು ಕೊಟ್ಟ ಅಜ್ಜಿ, ಅವನ ಬಗ್ಗೆ ವಿಚಾರಿಸಿದಾಗ ಹುಡುಗ ತನ್ನ ಕಥೆ ಕಷ್ಟಗಳೆಲ್ಲವನ್ನೂ ಹೇಳಿಕೊಂಡ, ಪ್ರೀತಿಯಿಂದ ಅವನನ್ನು ಬಾವಿಯ ಬಳಿಗೆ ಕರೆದುಕೊಂಡು ಹೋದ ಅಜ್ಜಿ ಬಾವಿ ಕಟ್ಟೆಯ ಮೇಲೆ ಮೂಡಿದ ತಗ್ಗಿನ ಗುರುತನ್ನು ತೋರಿಸಿ. ಇದೇನು ? ಎಂದು ಪ್ರಶ್ನಿಸಿದರು.
ಆಗ ಹುಡುಗ ಬಾವಿಯಿಂದ ನೀರನ್ನು ಸೇರಿದ ನಂತರ ನಿರಂತರ ಬಿಂದಿಗೆಯನ್ನು ಅಲ್ಲಿ ಇಡುವುದರಿಂದ ಆ ಜಾಗ ಸವೆದು ಹೋದಂತಾಗಿದೆ ಇದು ಬಿಂದಿಗೆಯ ಕೆಳಗೆ ಮೂಡಿರುವ ಗುರುತಷ್ಟೇ ಎಂದು ಉತ್ತರಿಸಿದ. ಆಗ ಅಜ್ಜಿ ಮಗು ಕಠಿಣ ಕಲ್ಲು ಕೂಡ ಹೀಗೆಯೇ ಬಿಂದಿಗೆಯ ತಳಭಾಗದ ಆಕಾರ ಪಡೆಯುವುದು ಸಾಧ್ಯ ಎಂದಾದರೆ ಪ್ರಜ್ಞೆ ಇರುವ ನೀವು ನಿರಂತರ ಪರಿಶ್ರಮದಿಂದ ಸಂಸ್ಕೃತ ಕಲಿಯುವುದು ಅಸಾಧ್ಯವೇ ಎಂದು ಪ್ರಶ್ನಿಸಿದಳು.
ಹುಡುಗನಿಗೆ ತನ್ನ ತಪ್ಪಿನ ಅರಿವಾಗಿತ್ತು. ಸತ್ಯದ ದರ್ಶನವಾಗಿತ್ತು . ಅಜ್ಜಿಗೆ ನಮಸ್ಕರಿಸಿ. ಮರಳಿ ಗುರುಕುಲಕ್ಕೆ ತೆರಳಿದ. ಗುರುಗಳ ಕ್ಷಮೆ ಕೋರಿ,ಕಷ್ಟಪಟ್ಟು ಅಭ್ಯಾಸದಲ್ಲಿ ತೊಡಗಿಸಿಕೊಂಡನು, ಮುಂದೆ ದೊಡ್ಡ ಸಂಸ್ಕೃತ ವಿದ್ವಾಂಸನಾದನು. ಕಾರ್ಯ ಕ್ಷೇತ್ರ ಯಾವುದೇ ಇರಲಿ ಯಶಸ್ಸು ಎಂಬುದು ಸುಲಭಕ್ಕೆ ದಕ್ಕುವ ಗಂಟಲ್ಲ, ಅದಕ್ಕೆ ಬದ್ಧತೆ ಮತ್ತು ಪರಿಶ್ರಮದ ಅಗತ್ಯವಿದೆ.
ಪಂಚತಂತ್ರದ ಆಮೆ ಮತ್ತು ಮೊಲದ ನಡುವಿನ ಓಟದ ಸ್ಪರ್ಧೆಯಲ್ಲಿ ಸಾಕಷ್ಟು ವೇಗವಾಗಿ ಓಡಿ ಅರ್ಧ ದೂರ ಕ್ರಮಿಸಿದ ಮೊಲ ಒಮ್ಮೆ ಹಿಂದಿರುಗಿ ನೋಡಿ ಆಮೆ ಸಾಕಷ್ಟು ದೂರದಲ್ಲೇ ಉಳಿದಿರುವುದನ್ನು ಕಂಡು ಸ್ವಲ್ಪ ವಿಶ್ರಮಿಸಿ ಹೋದರಾಯಿತು ಎಂದು ಉಪೇಕ್ಷಿಸಿ ಮಲಗಿ ಬಿಡುತ್ತದೆ. ಆದರೆ ನಿಧಾನವಾದರೂ ನಿರಂತರ ಸಾಗುವ ಆಮೆ, ಮೊಲ ಎಚ್ಚರಗೊಳ್ಳುವ ಮೊದಲೇ ಗುರಿ ತಲುಪುತ್ತದೆ ಎಂಬುದು ಕೂಡ ನಿರಂತರ ಪ್ರಯತ್ನದ ಮಹತ್ವಕ್ಕೆ ಉದಾಹರಣೆಯಾಗಿದೆ.
ಸಾಮರ್ಥ್ಯವಿದೆಯಲ್ಲ ಎಂಬ ಕುರುಡು ನಂಬಿಕೆಯಿಂದ ಸುಮ್ಮನೆ ಇದ್ದು ಬಿಟ್ಟರೆ ಸಹವರ್ತಿಗಳು ನಮಗೆ ಅರಿವಿಲ್ಲದಂತೆಯೇ ಮುಂದೆ ಸಾಗಿರುತ್ತಾರೆ. ಕೆಲಸದಲ್ಲಿ ಕೊಂಚವೇ ಉಪೇಕ್ಷೆ, ಸೋಮಾರಿತನ ಅಥವಾ ಜಡತ್ವಕ್ಕೆ ಅವಕಾಶ ನೀಡಿದರೂ ಯಶಸ್ಸು ನಮ್ಮಿಂದ ದೂರ ಸಾಗುತ್ತದೆ. ಆದ್ದರಿಂದ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಯಶಸ್ಸನ್ನು ಸಾಧಿಸಲು ಜೀವನದಲ್ಲಿ ಅಗತ್ಯವಾಗಿ ಬೇಕೇ ಬೇಕು.
ಕೃಪೆ: ಸಾಮಾಜಿಕ ಜಾಲತಾಣ (ಬರಹಗಾರ ಮಾಹಿತಿ ಲಭ್ಯವಿಲ್ಲ)