ಬೆಂಗಳೂರು: ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಜಾಮೀನು ವಿಚಾರದ ಕುರಿತು ನಾಳೆ ಆದೇಶ ನೀಡಲಿದೆ.
ಸೆಷನ್ ಕೋರ್ ಲ್ಲಿ ಜಾಮೀನು ಅರ್ಜಿ ವಜಾಗೊಂಡ ಕಾರಣ ದರ್ಶನ್ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದರ ನಡುವೆ ಬೆನ್ನಲ್ಲೇ ದರ್ಶನ್ ಅವರಿಗೆ ತೀವ್ರ ಬೆನ್ನು ಉರಿ ಕಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಸಲ್ಲಿಸಿದರು.
ಕುರಿತು ವೈದ್ಯಕೀಯ ವರದಿ ನೀಡುವಂತೆ ನ್ಯಾಯಾಧೀಶರು ಬಳ್ಳಾರಿ ಕಾರಾಗೃಹದ ಅಧಿಕಾರಿಗಳಿಗೆ ಅ.24 ರಂದು ಸೂಚನೆ ನೀಡಿದ್ದರು.
ಬಳ್ಳಾರಿ ವಿಮ್ಸ್ ನಲ್ಲಿ ಮಾಡಿಸಲಾದ ತಪಾಸಣೆ ವರದಿಯನ್ನು ಕಾರಾಗೃಹದ ಅಧಿಕಾರಿಗಳು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಧೀಶರಿಗೆ ನಿನ್ನೆ ಸಲ್ಲಿಸಿದರು.
ಈ ಕುರಿತು ಇಂದು ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ದರ್ಶನ್ ಅವರಿಗೆ ಉಂಟಾಗಿರುವ ಬೆನ್ನು ಉರಿ ಕುರಿತಾದ ಮೆಡಿಕಲ್ ವರದಿ ಬಗ್ಗೆ ಪ್ರಬಲ ವಾದ ಮಂಡಿಸಿದರು. ಅಲ್ಲದೆ ಹಿಂದಿನ ಪ್ರಕರಣಗಳಲ್ಲಿ ಅನಾರೋಗ್ಯದ ಕಾರಣ ಸುಪ್ರೀಂ ಕೋರ್ಟ್ ನೀಡಿರುವ ಜಾಮೀನು ಕುರಿತು ನ್ಯಾಯಾಧೀಶರ ಗಮನಕ್ಕೆ ತಂದರು.
ನಂತರ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದು, ಮೆಡಿಕಲ್ ಬೋರ್ಡ್ ಸಲಹೆ ಪಡೆಯಬೇಕು ಎಂದರು. ಅಲ್ಲದೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಎಂಬುದನ್ನು ಮಾಹಿತಿ ನೀಡಿದ ನಂತರ ಜಾಮೀನು ಕುರಿತು ತೀರ್ಮಾನಿಸ ಬಹುದು ಎಂದರು.
ಇದಕ್ಕೆ ಉತ್ತರಿಸಿದ ನಾಗೇಶ್ ಅವರು ದರ್ಶನ್ ಮೈಸೂರು ನಿವಾಸಿ ಕಾರಣ ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಈ ಕುರಿತು ಪ್ರತಿ ದಿನದ ಬೆಳವಣಿಗೆಯನ್ನು ಪೊಲೀಸರಿಗೆ ತಿಳಿಸಲಾಗುವುದು ಎಂದರು
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಎಸ್.ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಕುರಿತು ನಾಳೆ ಆದೇಶ ನೀಡುವುದಾಗಿ ತಿಳಿಸಿದರೆಂದು ವರದಿ ತಿಳಿಸಿದೆ.