ದಾವಣಗೆರೆ: ವಾರಂತ್ಯದ ರಜೆಯ ಲಾಭ ಪಡೆದಿರುವ ಕಳ್ಳರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಬ್ಯಾಂಕ್ ಕಿಟಕಿಯ ಸರಳು ಮುರಿದು ಹಣ ಚಿನ್ನಾಭರಣ ಕದ್ದೊಯ್ದಿರುವ ಘಟನೆ ಜಿಲ್ಲೆಯ ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಶಾಖೆಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆಯೇ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಗ್ಗೆ ಕರ್ತವ್ಯಕ್ಕೆ ಆಗಮಿಸಿದ ಬ್ಯಾಂಕ್ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿದ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದೆ.
ಶನಿವಾರ ಹಾಗು ಭಾನುವಾರ ಎರಡು ದಿನಗಳ ಕಾಲ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ಈ ಕೃತ್ಯ ಎಸಗಿದ್ದಾರೆ.
ಎಸ್ ಬಿಐ ಬ್ಯಾಂಕ್ ಕಟ್ಟಡದ ಕಿಟಕಿಯ ಸರಳುಗಳನ್ನು ಮುರಿದಿರುವ ಕಳ್ಳರು ನುಗ್ಗಿರುವ ದರೋಡೆಕೋರರು ಇಡೀ ಬ್ಯಾಂಕ್ ತಡಕಾಡಿದ್ದಾರೆ. ಬಳಿಕ ಬ್ಯಾಂಕ್ ನ ಮೇನ್ ಲಾಕರ್ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಅಲ್ಲದೆ ಚಾಲಾಕಿ ಕಳ್ಳರು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.