ಸಣ್ಣ ದೇಶಕ್ಕೆ ಒಬ್ಬ ಒಳ್ಳೆಯ ದೊರೆಯಿದ್ದ. ಅವನೆಂದಿಗೂ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಲಿಲ್ಲ. ಬದಲಾಗಿ ನೊಂದವರ ಬಳಿಗೆ ಹೋಗಿ ಕಣ್ಣೀರೊರೆಸಿದ.
ಸೋತವರಿಗೆ ನೆರವು ನೀಡಿದ. ಅಸಹಾಯಕರ ಸೇವೆ ಮಾಡಿದ. ಎಲ್ಲರೂ ತನ್ನ ಸಮಾನರೆಂದು ತಿಳಿದ. ಪ್ರಜೆಗಳು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಅವನ ಮೇಲೆ ಪ್ರೀತಿಯಿಟ್ಟರು.
ಒಂದು ಸಲ ಚಕ್ರವರ್ತಿ ಆ ದೇಶದ ಬಳಿಗೆ ಕಾರ್ಯ ನಿಮಿತ್ತ ಬಂದ. ತನ್ನನ್ನು ಭೇಟಿಯಾಗುವಂತೆ ದೊರೆಗೆ ಭಟರ ಮೂಲಕ ಕರೆ ಕಳುಹಿಸಿದ.
ಆಗ ದೊರೆ ಒಬ್ಬ ರೋಗಿಷ್ಠನ ಮನೆಗೆ ಬಂದು ಅವನ ಶುಶ್ರೂಷೆ ಮಾಡುವುದರಲ್ಲಿ ನಿರತನಾಗಿದ್ದ. ಭಟರು ‘ಕೂಡಲೇ ಬಂದು ಭೇಟಿಯಾಗಬೇಕೆಂದು ಚಕ್ರವರ್ತಿಗಳು ಕರೆ ಕಳುಹಿಸಿದ್ದಾರೆ ಬನ್ನಿ’ ಎಂದರು. ದೊರೆ ವಿನೀತನಾಗಿ ‘ಕಷ್ಟದಲ್ಲಿರುವ ಪ್ರಜೆಯೊಬ್ಬನಿಗೆ ನೆರವಾಗುವ ಕೆಲಸದಲ್ಲಿದ್ದೇನೆ. ಇದು ಮುಗಿದ ಕೂಡಲೇ ಬರುವುದಾಗಿ ಹೇಳಿ’ ಎಂದು ತಿಳಿಸಿದ.
ಈ ಮಾತಿನಿಂದ ಚಕ್ರವರ್ತಿಗೆ ಅಸಾಧ್ಯ ಕೋಪ ಬಂತು. ‘ಏನಿದು? ಒಬ್ಬ ಸಣ್ಣ ರಾಜನಿಗೆ ಚಕ್ರವರ್ತಿಯ ಆಜ್ಞೆಯನ್ನು ಧಿಕ್ಕರಿಸುವಂಥ ಪೊಗರೇ? ತಕ್ಷ ಣ ಈ ರಾಜ್ಯದ ಮೇಲೆ ಯುದ್ಧ ಸಾರಿ. ಅವನನ್ನು ಸದೆ ಬಡಿಯಿರಿ’ ಎಂದು ಮಂತ್ರಿಗಳಿಗೆ ಆಜ್ಞಾಪಿಸಿದ.
ದೊರೆಗೆ ಯುದ್ಧದ ವರ್ತಮಾನ ತಲುಪಿತು. ಮಂತ್ರಿಗಳು ಯುದ್ಧದ ಸಿದ್ಧತೆಗೆ ಮುಂದಾದರು. ಆದರೆ ದೊರೆ ಒಪ್ಪಲಿಲ್ಲ. ‘ಯುದ್ಧ ಮಾಡಿದರೆ ನೂರಾರು ಮಂದಿಯ ಸಾವು ನಿಶ್ಚಿತ. ಅದರ ಬದಲು ರಾಜ್ಯವನ್ನು ಚಕ್ರವರ್ತಿಗೆ ಒಪ್ಪಿಸಿದರೆ ಎಲ್ಲರೂ ಬದುಕುತ್ತಾರೆ’ ಎಂದು ನಿರ್ಧರಿಸಿ ಚಕ್ರವರ್ತಿಯ ಭೇಟಿಗೆ ಸಿದ್ಧನಾದ.
ದೊರೆ ಒಬ್ಬ ಸೇವಕನ ಜೊತೆಗೆ ಕುದುರೆಯ ಮೇಲೆ ಕುಳಿತುಕೊಂಡು ಚಕ್ರವರ್ತಿಯ ಬಳಿಗೆ ಹೊರಟ. ಕಡು ಬಿಸಿಲಿಗೆ ಕಾಲು ಸುಡುತ್ತಿತ್ತು. ತಾನು ಕುದುರೆಯ ಮೇಲೆ ಸಾಗುವಾಗ ಸೇವಕ ಕುದುರೆಯ ಹಗ್ಗ ಹಿಡಿದುಕೊಂಡು ನಡೆದು ಬರುತ್ತಿದ್ದ. ಅವನು ನಡೆಯಲಾಗದೆ ಕಷ್ಟಪಡುತ್ತಿದ್ದ. ಅವನಿಗೆ ಆಯಾಸವಾಗುತ್ತಿದೆಯೆಂದು ದೊರೆಗೆ ಅರ್ಥವಾಯಿತು.
ಕುದುರೆಯ ಮೇಲಿಂದ ಕೆಳಗಿಳಿದ. ಸೇವಕನನ್ನು ಕರೆದು ‘ನೀನು ತುಂಬ ಬಳಲಿದ್ದಿ. ನೀನೀಗ ಕುದುರೆ ಮೇಲೆ ಕುಳಿತುಕೋ. ನಾನು ಸ್ವಲ್ಪ ದೂರ ಹಗ್ಗ ಹಿಡಿದುಕೊಂಡು ನಡೆದು ಬರುತ್ತೇನೆ. ನಿನ್ನ ಬಳಲಿಕೆ ತೀರಿದ ಮೇಲೆ ನಾನು ಕುಳಿತುಕೊಳ್ಳುತ್ತೇನೆ. ನಾವಿಬ್ಬರೂ ಹೀಗೆ ಸರದಿ ಬದಲಾಯಿಸಿಕೊಂಡು ಮುಂದೆ ಸಾಗೋಣ’ ಎಂದ.
ಸೇವಕ ಗಾಬರಿಯಿಂದ ‘ಎಲ್ಲಾದರೂ ಉಂಟೇ? ನೀವು ನಡೆದು ನಾನು ಕುದುರೆಯ ಮೇಲೇರುವುದೆ!’ ಎಂದು ದೂರ ನಿಂತ. ಆದರೆ ದೊರೆ ಒತ್ತಾಯದಿಂದ ಅವನನ್ನೂ ಕುದುರೆಯಲ್ಲಿ ಕೂಡಿಸಿ ಮುಂದೆ ಸಾಗಿದ.
ಒಮ್ಮೆ ಸೇವಕ, ಒಮ್ಮೆ ತಾನು ಕುದುರೆಯ ಮೇಲೇರುತ್ತ ಕಡೆಗೂ ಚಕ್ರವರ್ತಿಯ ಶಿಬಿರ ತಲಪಿದ. ಆಗ ಸೇವಕ ಕುದುರೆಯ ಮೇಲಿದ್ದ. ಅವನನ್ನೇ ದೊರೆಯೆಂದು ಭಾವಿಸಿ ಮಾತನಾಡಿಸಲು ಬಂದ ಚಕ್ರವರ್ತಿಯ ಬಳಿ ಸೇವಕ ಕುದುರೆಯಿಂದ ಕೆಳಗಿಳಿದು ಕೈ ಜೋಡಿಸಿ ‘ದೊರೆಗಳು ಅವರು! ನಾನು ಸೇವಕ’ ಎಂದು ವಿನಯದಿಂದ ಹೇಳಿದ.
ಚಕ್ರವರ್ತಿ ನಡೆದ ವಿಷಯ ತಿಳಿದುಕೊಂಡ. ಮರುಕ್ಷಣವೇ ಪಶ್ಚಾತ್ತಾಪದಿಂದ ತಲೆ ತಗ್ಗಿಸಿದ. ‘ಛೇ! ಸೇವಕನನ್ನೂ ತನ್ನ ಸಮಾನನೆಂದು ಭಾವಿಸಿ ಕುದುರೆಯ ಮೇಲೆ ಕರೆ ತರುವ ದೊರೆ ಈ ಭರತಖಂಡದಲ್ಲೇ ಇರಲಿಕ್ಕಿಲ್ಲ. ಇಂತಹವನೊಂದಿಗೆ ಯುದ್ಧವೆಸಗಿದರೆ ಪ್ರಜೆಗಳು ದಂಗೆಯೆದ್ದು ನನ್ನನ್ನೇ ಕೊಂದಾರು. ಋುಷಿ ಸದೃಶನಾದ ದೊರೆಯ ರಾಜ್ಯವನ್ನು ಸ್ವತಂತ್ರಗೊಳಿಸುತ್ತೇನೆ’ ಎಂದ ಹೇಳಿದ.
ಕೃಪೆ: ಸಾಮಾಜಿಕ ಜಾಲತಾಣ.