ದೊಡ್ಡಬಳ್ಳಾಪುರ: ನಮ್ಮ ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳು ಪ್ರಮುಖ ಪಾತ್ರ ವಹಿಸಲಿದ್ದು, ಗ್ರಾಮಾಂತರ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಕಲೆಗಳಿಗೆ ಉತ್ತಮ ವೇದಿಕೆಗಳನ್ನು ಕಲ್ಪಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ತಿಳಿಸಿದರು.
ತಾಲೂಕಿನ ಆರೂಢಿ ಗ್ರಾಮದ ಸಮುದಾಯ ಭವನದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆದ ಸಾಂಸ್ಕೃತಿಕ ಕಲಾ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನಕ್ಷರಸ್ಥರು, ಗ್ರಾಮೀಣ ಜನರಿಂದ ರಚಿತವಾದ ಜನಪದ ಸಾಹಿತ್ಯದಲ್ಲಿ ಬದುಕಿನ ಮೌಲ್ಯಗಳು ಅಡಗಿವೆ. ಇದರಿಂದ ನಮ್ಮ ಪರಂಪರೆ ಉಳಿಯುತ್ತಿದೆ. ಆದರೆ ಇಂದು ರಂಗಕಲೆ ಹಾಗೂ ಜನಪದ ಕಲಾ ಪ್ರಕಾರಗಳಲ್ಲಿ ಯುವ ಪೀಳಿಗೆ ಭಾಗವಹಿಸುತ್ತಿರುವುದು ಕಡಿಮೆಯಾಗುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಕಲಾ ಪ್ರಕಾರಗಳಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಾಸಾಶನ ಪಡೆಯುತ್ತಿರುವ ಕಲಾವಿದರು ದೊಡ್ಡಬಳ್ಳಾಪುರ ತಾಲೂಕಿನಲ್ಲಿದ್ದಾರೆ. ಇದಕ್ಕೆ ಕಲಾವಿದರ ಸಂಘ ನೆರವು ನೀಡುತ್ತಿರುವುದು ಶ್ಲಾಘನೀಯವಾಗಿದ್ದು, ಮಾಸಾಶನ ಹಾಗೂ ಕಲಾ ಉತ್ತೇಜನದ ಕಾರ್‍ಯಕ್ರಮಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಭೇಟಿ ಮಾಡುವಂತೆ ಕರೆ ನೀಡಿದರು.
ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಮಾತನಾಡಿ, ತೊಗಲು ಬೊಂಬೆಯಾಟ, ಬಯಲಾಟ ಮೊದಲಾದ ಕಲಾಪ್ರಕಾರಗಳು ಇಂದು ನಶಿಸುತ್ತಿವೆ. ಮೊಬೈಲ್‌ಗೆ ದಾಸರಾಗಿರುವ ಇಂದಿನ ಪೀಳಿಗೆ ಹಿರಿಯರನ್ನು ಕಾಲಕ್ಕೆ ತಕ್ಕವರಲ್ಲ ಎಂದು ಜರಿಯುವುದು ಕಾಣುತ್ತಿದೆ. ಬೌದ್ದಿಕ ದಿವಾಳಿತನವಾದರೆ ನಮ್ಮ ವಿನಾಶ ಖಂಡಿತ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ಥಳೀಯರಾದ ಸಾಸಲು ಚಿನ್ನಮ್ಮ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಜನಪದ ಕಲಾವಿದರಾಗಿದ್ದು, ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಿದೆ ಎಂದರು.
ಹಿರಿಯ ಕಲಾವಿದ ಹಾಗೂ ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಕೆ.ನರಸಿಂಹಯ್ಯ ಕಾರ್‍ಯಕ್ರಮ ಉದ್ಘಾಟಿಸಿ, ಕಲಾವಿದರಿಗೆ ಸೂಕ್ತ ಉತ್ತೇಜನ ನೀಡಬೇಕಿರುವುದು ಸಮುದಾಯದ ಹೊಣೆಯಾಗಿದೆ. ಪ್ರೋತ್ಸಾಹ ನೀಡಿದರೆ ಉತ್ತಮ ಕಲಾವಿದರು ರೂಪುಗೊಳ್ಳುತ್ತಾರೆ. ಗ್ರಾಮಗಳಲ್ಲಿ ಸಾಂಸ್ಕೃತಿಕ ಕಾರ್‍ಯಕ್ರಮಗಳ ಆಯೋಜನೆ ಮಾಡಲು ಅವಕಾಶ ನೀಡುವುದು ಸಂತಸ ತಂದಿದೆ ಎಂದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಅದ್ಯಕ್ಷತೆ ವಹಿಸಿದ್ದರು.
ಕಾರ್‍ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ, ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್‍ಯದರ್ಶಿ ಬಿ.ಚಂದ್ರಶೇಖರ್, ಗೌರವ ಅಧ್ಯಕ್ಷ ಎಸ್.ರಾಮಮೂರ್ತಿ. ಉಪಾಧ್ಯಕ್ಷರಾದ ಎಚ್.ಪ್ರಕಾಶ್ ರಾವ್, ಖಜಾಂಚಿ ಎಚ್.ಮುನಿಪಾಪಯ್ಯ, ಸಹ ಕಾರ್‍ಯದರ್ಶಿ ಎ.ಮಂಜುನಾಥ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್, ಸಲಹಾ ಸಮಿತಿಯ ಎನ್.ವೆಂಕಟೇಶ್, ವೆಂಕಟರಾಜು, ಸಂಚಾಲಕ ಶ್ರೀನಿವಾಸ್, ನಿರ್ದೇಶಕರಾದ ಅಶ್ವತ್ಥನಾರಾಯಣ್, ಕೆ.ಎನ್.ತಮ್ಮಣ್ಣ, ಎನ್.ರವಿಕುಮಾರ್, ಗಂಗಮ್ಮ ಸೇರಿದಂತೆ ಕಲಾವಿದರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್‍ಯಕ್ರಮದಲ್ಲಿ ತಾಲೂಕು ಕಲಾವಿದರ ಸಂಘದಿಂದ ಶಿವರಾಜ್ ನಿರ್ದೇಶನದ ಗೆದ್ದವರು ಯಾರು? ಸಾಮಾಜಿಕ ನಾಟಕ ನಡೆಯಿತು. ವಿವಿಧ ಕಲಾವಿದರಿಂದ ರಂಗಗೀತೆ, ಜನಪದ ಗೀತೆ, ಭಜನೆ, ಭಕ್ತಿಗೀತೆಗಳ ಗಾಯನ ನಡೆಯಿತು.