ದೊಡ್ಡಬಳ್ಳಾಪುರ: ಇತ್ತೀಚಿಗಷ್ಟೇ ಅಕ್ಟೋಬರ್ ಎರಡರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನದ ಅಂಗವಾಗಿ ಸ್ವಚ್ಛ ಭಾರತ್ ಯೋಜನೆಯ ಹೆಸರಲ್ಲಿ ಪೊರಕೆ ಹಿಡಿದು, ಜನಪ್ರತಿನಿದಿಗಳು, ಕಸ ಗುಡಿಸುವ ಮೂಲಕ ಅಧಿಕಾರಿಗಳು ಪೋಟೋಗೆ ಫೋಸ್ ನೀಡಿ ಸುದ್ದಿಯಾಗಿದ್ದಾರೆ. ಆದರೆ ವಾಸ್ತವವಾಗಿ ಸ್ವಚ್ಛ ಭಾರತ ಯೋಜನೆ ಒಂದು ದಿನದ ಪೋಟೋಗೆ ಪೋಸ್ ನೀಡುವುದಕ್ಕೆ ಮಾತ್ರ ಸೀಮಿತ, ಬಿಟ್ಟರೆ ಕಾರ್ಯಚರಣೆ ಬರುತ್ತಿಲ್ಲ ಎಂಬುದು ಅನೇಕ ಪ್ರಜ್ಞಾವಂತ ನಾಗರೀಕರ ಬೇಸರ.
ಇದಕ್ಕೆ ಪೂರಕ ವೆಂಬಂತೆ ದೊಡ್ಡಬಳ್ಳಾಪುರದ ಶಕ್ತಿ ಕೇಂದ್ರ ತಾಲೂಕು ಕಚೇರಿಯಿಂದ ಮಲಯುಕ್ತ ತ್ಯಾಜ್ಯ ನೀರು ರಸ್ತೆ ಹರಿಯುತ್ತಿದ್ದು, ಸ್ವಚ್ಛ ಭಾರತ ಯೋಜನೆಗೆ ಅಧಿಕಾರಿಗಳು ತೋರುತ್ತಿರುವ ಕಾಳಜಿಯನ್ನು ಅಣಕಿಸುತ್ತಿದೆ.
ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಕಚೇರಿ, ತಹಶಿಲ್ದಾರ್ ಕಚೇರಿ, ನೋಂದಣಿ ಕಚೇರಿ, ಖಜಾನೆ, ಆಹಾರ ಇಲಾಖೆ, ಚುನಾವಣೆ ಇಲಾಖೆ ಸೇರಿ ಅನೇಕ ಕಚೇರಿಯನ್ನು ಒಳಗೊಂಡಿದೆ.
ಆದರೆ ದೊಡ್ಡಬಳ್ಳಾಪುರದ ಶಕ್ತಿ ಕೇಂದ್ರವೆಂದೇ ಕರೆಯಲ್ಪಡುವ, ತಾಲೂಕಿನ ಆಗುಹೋಗುಗಳನ್ನು ನೋಡಿಕೊಳ್ಳಬೇಕಾದ ತಾಲೂಕು ಕಚೇರಿ ಆವರಣದಲ್ಲಿಯೇ ಸ್ವಚ್ಚತೆ ಕಾಣೆಯಾಗಿರುವುದು ಮಾತ್ರ ವಿಪರ್ಯಾಸ.
ಇಲ್ಲಿನ ಖಜಾನೆ ಕಚೇರಿ ಕಿಟಕಿ ಬಳಿಯಿರುವ ಮಲ ಗುಂಡಿಯಿಂದ ನೀರು ತುಂಬಿ ಹರಿಯುತ್ತಿದ್ದು, ನೊಂದಣಿ ಕಚೇರಿ ಸಾಗುವ ಬಾಗಿಲು ಮೂಲಕ ಸಾಗಿ, ಮೊದಲ ಗೇಟ್ ಮೂಲಕ ರಸ್ತೆ ಹರಿಯುತ್ತಿದೆ.
ಇದರಿಂದಾಗಿ ಇಲ್ಲಿಗೆ ಬರುವ ಸಾರ್ವಜನಿಕರು ಮೂಗನ್ನು ಮುಚ್ಚಿ ಓಡಾಡುವ ಅನಿವಾರ್ಯತೆ ಎದುರಾಗಿದೆ. ಈ ಸಮಸ್ಯೆ ನಿನ್ನೆ ಮೊನ್ನೆಯದಾ ಎಂದು ತಿಳಿದರೆ ಅದು ತಪ್ಪು ಎಂಬುದಕ್ಕೆ ಸಾಕ್ಷಿಯಾಗಿ ಈ ಮಲಯುಕ್ತ ತ್ಯಾಜ್ಯ ನೀರು ನಿರಂತರವಾಗಿ ಹರಿದಿರುವುದಕ್ಕೆ ಪಾಚಿ ಕಟ್ಟಿದೆ.
ಇಷ್ಟು ದೊಡ್ಡ ಮಟ್ಟದ ಅವ್ಯವಸ್ಥೆ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅರಿವಿಲ್ಲವೇ..? ಅಥವಾ ತಿಳಿದು ತಿಳಿಯದಂತೆ ವರ್ತಿಸುತ್ತಾರೆಯೇ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಪ್ರಶ್ನಿಸಿದ್ದಾರೆ.
ಈ ಕುರಿತು ಕಿಡಿಕಾರಿರುವ ಅವರು, ಊರಿಗೆಲ್ಲ ಸ್ವಚ್ಛತೆ ಪಾಠ ಮಾಡುವ ಅಧಿಕಾರಿಗಳು ತನ್ನದೇ ಕಚೇರಿಯಿಂದ ಮಲಯುಕ್ತ ತ್ಯಾಜ್ಯ ನೀರು ರಸ್ತೆಗೆ ಹರಿಯುತ್ತಿದ್ದರು ತಿಳಿಯದೇ ಇರುವುದು ತಾಲೂಕಿನ ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.