ತುಮಕೂರು: ಸಾಲಬಾಧೆ ತಾಳಲಾರದೆ ಮಾತ್ರೆ ಸೇವಿಸಿ ದಂಪತಿ ಆತ್ಮಹತ್ಯೆಗೆ ಯತ್ನಿಸಿದ ವೇಳೆ ಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಹೌಸಿಂಗ್ ಬೋರ್ಡ್ ನಲ್ಲಿ ನಡೆದಿದೆ.
ಅನಿಲ್ (47 ವರ್ಷ) ಹಾಗೂ ಉಮಾ (45 ವರ್ಷ) ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಮಾತ್ರೆ ಸೇವಿಸಿದ ಪರಿಣಾಮ ಅನಿಲ್ ಮೃತಪಟ್ಟಿದ್ದು, ಪತ್ನಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಅನಿಲ್ ಕಗ್ಗೆರೆ ಗ್ರಾಮದವರಾಗಿದ್ದು, ಹೌಸಿಂಗ್ ಬೋರ್ಡ್‌ನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಜೊತೆ ವಾಸವಿದ್ದರು. ಹಲವು ವರ್ಷಗಳಿಂದ ಕುಣಿಗಲ್ ಪಟ್ಟಣದಲ್ಲಿ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಇತ್ತೀಚಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಅನಿಲ್ ಸುಮಾರು 8-10 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಿರುಕುಳಕ್ಕೆ ಬೇಸತ್ತು ಸೋಮವಾರ ಸಂಜೆ ತಮ್ಮ ಮನೆಯಲ್ಲಿ ಮಾತ್ರೆ ಸೇವಿಸಿ ಪತಿ, ಪತ್ನಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗಂಡ ಅನಿಲ್ ಮನೆಯಲ್ಲಿ ಸಾವನ್ನಪ್ಪಿದ್ದಾರೆ. ಪತ್ನಿ ಉಮಾಗೆ ಕುಣಿಗಲ್ ಸರಕಾರಿ ತಾಲೂಕು ಆಸತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್ ಕೆವಿ ಹಾಗೂ ಕುಣಿಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಾರಿಬಿದ್ದು ಇಬ್ಬರ ಸಾವು
ಯಾದಗಿರಿ: ಹುಣಸಗಿ ತಾಲೂಕಿನ ಬೆಂಚಿಗಡ್ಡಿ ಸಮೀಪದ ಸ್ನಾನಕ್ಕೆ ಹೋಗಿ ಕೃಷ್ಣಾನದಿ ಯಲ್ಲಿ ಕಾಲುಜಾರಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ಪಿಪಿಸಿಎಲ್ ವಿದ್ಯುತ್ ಪೂರೈಕೆ ಘಟಕದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನಾಗಲ್ಯಾಂಡ್ ಮೂಲದ ಆಲಮ್ (23 ವರ್ಷ), ವಿಜಯಪುರ ಮೂಲದ ಮಾರುತಿ (24 ವರ್ಷ) ದುರ್ದೈವಿ ಮೃತ ದುದೈವಿಗಳು.
ಕೃಷ್ಣಾನದಿಯಲ್ಲಿ ಸೋಮವಾರ ಸ್ನಾನಕ್ಕಾಗಿ ತೆರಳಿದಾಗ ಆಲಮ್ ಜಾರಿ ನೀರಿಗೆ ಬಿದ್ದಿದ್ದಾನೆ. ಪಕ್ಕದಲ್ಲಿಯೇ ಇದ್ದ ಮಾರುತಿ ಎಂಬಾತ ರಕ್ಷಣೆಗೆ ನದಿಗೆ ಇಳಿದಾಗ ಇಬ್ಬರೂ ನೀರು ಪಾಲಾಗಿದ್ದಾರೆ.
ಮಂಗಳವಾರ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕೋಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿನಿ ಸಾವು
ಹುಕ್ಕೇರಿ: ವಸತಿ ಶಾಲೆಯ ಮೊದಲ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಹುಕ್ಕೇರಿ ತಾಲೂಕಿನ ಹಿರೇಕೋಡಿ ಗ್ರಾಮ ದಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಶಿಂದಿ ಕುರಬೇಟ್ ಗ್ರಾಮದ ಆಫ್ರೀನ್ ಜಮಾ ದಾರ (17 ವರ್ಷ) ಮೃತ ವಿದ್ಯಾ ರ್ಥಿನಿ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇ ಕೋಡಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ.
ಪರೀಕ್ಷೆ ಹಿನ್ನೆಲೆ ಮಧ್ಯ ರಾತ್ರಿ ಮೊದಲ ಮಹಡಿಯಲ್ಲಿ ಓದುತ್ತ ಕುಳಿತಿದ್ದಳು. ಈ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾಳೆ.
ಚಿಕ್ಕೋಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು.
ಮೃತ ವಿದ್ಯಾರ್ಥಿನಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.