Site icon ಹರಿತಲೇಖನಿ

News update: ಅಣ್ಣನ ಶವ ಪತ್ತೆ, ತಂಗಿಗಾಗಿ ಶೋಧ

ಬೆಂಗಳೂರು: ನೀರು ತರಲು ಹೋಗಿದ್ದ ಅಣ್ಣ- ತಂಗಿ ಆಯತಪ್ಪಿ ಬಿದ್ದು ಕೆಂಗೇರಿ ಕೆರೆಯಲ್ಲಿ ಮುಳುಗಿದ್ದು, ಇಂದು ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಅಣ್ಣನ ಮೃತದೇಹವನ್ನು ಹೊರತೆಗೆಯಲಾಗಿದ್ದು, ತಂಗಿಯ ಶವಕ್ಕಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಕೆಂಗೇರಿ ಸಮೀಪದ ಹರ್ಷ ಲೇಔಟ್‌ನಲ್ಲಿ ಸಹೋದರಿ ಜೊತೆ ವಾಸವಾಗಿರುವ ಬಿಬಿಎಂಪಿ ಯಲ್ಲಿ ಪೌರಕಾರ್ಮಿಕರಾಗಿರುವ ನಾಗಮ್ಮ ಅವರ ಪುತ್ರ ಜಾನ್ಸನ್(13) ಮೃತದೇಹ ಪತ್ತೆಯಾಗಿದ್ದು, ಮಗಳು ಮಹಾಲಕ್ಷ್ಮೀ(11) ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.

ನಿನ್ನೆ ಸಂಜೆ ಕೆಲಸದ ನಿಮಿತ್ತ ತಾಯಿ ನಾಗಮ್ಮ ಹೊರಗೆ ಹೋಗಿದ್ದರು. ನೀರು ತರಲೆಂದು ಆಟವಾಡುತ್ತಾ ಅಣ್ಣ- ತಂಗಿ ಇಬ್ಬರು ಬಿಂದಿಗೆ ತೆಗೆದುಕೊಂಡು ಹೊರಗೆ ಹೋಗಿದ್ದಾರೆ.

ಕೆಂಗೇರಿ ಕೆರೆ ಬಳಿ ಹೋಗಿದ್ದಾಗ ಬಿಂದಿಗೆ ಜಾರಿ ನೀರಿಗೆ ಬಿದ್ದಿದೆ. ಮಹಾಲಕ್ಷ್ಮೀ ಬಿಂದಿಗೆ ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ ಕಾಲು ಜಾರಿ ಕೆರೆಗೆ ಬಿದ್ದಿದ್ದಾಳೆ.

ತಕ್ಷಣ ಇದನ್ನು ಇದನ್ನು ಕಂಡ ಅಣ್ಣ ಜಾನ್ಸಿಸೀನ ತಂಗಿಯ ರಕ್ಷಣೆಗಾಗಿ ನೀರಿಗೆ ಇಳಿದಾಗ ಆತನೂ ಸಹ ನೀರಿನಲ್ಲಿ ಮುಳುಗಿದ್ದಾನೆ.

ಕೆಲ ಸಮಯದ ಬಳಿಕ ನಾಗಮ್ಮ ಮನೆಗೆ ಬಂದಾಗ ಮಕ್ಕಳಿಬ್ಬರು ಕಾಣಿಸಿಲ್ಲ. ಇವರನ್ನು ಹುಡುಕಿಕೊಂಡು ಹೋದಾಗ ಕೆಂಗೇರಿ ಕೆರೆ ಬಳಿ ಮಗನ ಬಟ್ಟೆ ಕಂಡು ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತಪಡಿಸಿ ಕೆಂಗೇರಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆರೆ ಬಳಿ ಬಂದು ಶೋಧ ಕಾರ್ಯದಲ್ಲಿ ತೊಡಗಿದರಾದರೂ ಕತ್ತಲಾಗಿದ್ದರಿಂದ ಹಾಗೂ ವಿಪರೀತ ಮಳೆ ಸುರಿಯುತ್ತಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯದಲ್ಲಿ ತೊಡಗಿದ್ದರು. ಸತತ ಮೂರು ಗಂಟೆಯ ಬಳಿಕ 11 ಗಂಟೆ ವೇಳೆಗೆ ಬಾಲಕ ಜಾನ್ಸಿಸೀನ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ.

ಬಾಲಕಿ ಮಹಾಲಕ್ಷ್ಮೀ ಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಯ ರೋಧನ ಮುಗಿಲುಮುಟ್ಟಿತ್ತು.

Exit mobile version