ಒಂದು ದಟ್ಟವಾದ ಕಾಡು. ಅಲ್ಲಿ ನರಿ ಮತ್ತು ಅದರ ಮರಿ ಆಹಾರಕ್ಕಾಗಿ ಅಲೆದವು. ಆದರೆ, ಏನು ಸಿಗಲಿಲ್ಲ. ತಿರುಗುತ್ತಾ ತಿರುಗುತ್ತಾ ಕಾಡಿನಿಂದ ಹೊರಬಂದವು. ಅವುಗಳಿಗೆ ದೂರದಲ್ಲಿ ತೋಟದ ಮನೆಯೊಂದು ಕಾಣಿಸಿತು.
ಕ್ಕೊ, ಕ್ಕೊ, ಕ್ಕೊ ಎಂಬ ಶಬ್ಧ ಕೇಳಿಸಿತು. ಅವು ಧ್ವನಿಯನ್ನು ಅನುಸರಿಸಿಕೊಂಡು ಹೋದವು. ಕೋಳಿಗಳು ತೋಟದ ಬೇಲಿ ಸಾಲಿನಲ್ಲಿ ಮೇವು ಆರಿಸುತ್ತಿದ್ದವು.
ಕೋಳಿಗಳನ್ನು ಕಂಡು ನರಿಯ ಮರಿ ಮನದಲ್ಲೇ ಹಿಗ್ಗಿತು. ಆ ಸಂತೋಷದಲ್ಲಿ “ಎಷ್ಟೋಂದು ಕೋಳಿಗಳು”! ಎನ್ನುತ್ತಾ ಆ ಕಡೆಗೆ ನುಗ್ಗಿತು. ಬೇಲಿ ಅಂಚಿನಲ್ಲಿದ್ದ ಬಲೆಯಲ್ಲಿ ನರಿಯ ಮರಿ ಸಿಕ್ಕಿ ಹಾಕಿಕೊಂಡಿತು. ಗಾಬರಿಯಿಂದ ಅದು ಕಿರುಚುಕೊಳ್ಳತೊಡಗಿತು. ನರಿ ತನ್ನ ಮರಿಯನ್ನು ಬಿಡಿಸಿಕೊಳ್ಳಲು ಹತ್ತಿರ ಬಂದಿತು.
ಅಷ್ಟರಲ್ಲಿ ತೋಟದ ಒಳಗಿನಿಂದ ರೈತನು ಬರುವುದನ್ನು ಕಂಡಿತು. ಭಯದಿಂದ ಹಿಂದೆ ಸರಿಯಿತು. ಮರಿಯನ್ನು ಉಳಿಸಲು ಸಮಯ ಸಾಧಿಸಿ ಸ್ವಲ್ಪ ದೂರದಲ್ಲಿ ಕುಳಿತಿತು. ಆದರೆ ಜನರ ಓಡಾಟ ಹೆಚ್ಚಾದುದರಿಂದ ಅನಿವಾರ್ಯವಾಗಿ ಅಲ್ಲಿಂದ ಅದು ಜಾಗ ಖಾಲಿ ಮಾಡಿತು.
ತಾಯಿ ನರಿಗೆ ತನ್ನ ಮರಿಯನ್ನು ಅಗಲಿ ಇರಲಾಗಲಿಲ್ಲ. ಮರುದಿನ ಹೇಗಾದರೂ ಮಾಡಿ ಮರಿಯನ್ನು ಬಿಡಿಸಿಕೊಂಡು ಬರಬೇಕೆಂದು ತೋಟಕ್ಕೆ ಬಂದಿತು. ಸಂಜೆಯವರೆಗೆ ಕಾದು ಕುಳಿತಿತು. ಆದರೆ ತನ್ನ ಮರಿಯ ಸುಳಿವೇ ಕಾಣಲಿಲ್ಲ. ದುಃಖದಿಂದ ತೋಟದ ಬೇಲಿ ಸುತ್ತಾ ತಿರುಗಿತು.
ಅಲ್ಲೊಂದು ಕಂಡಿ ಇತ್ತು. ಅದರೊಳಗೆ ಉಪಾಯವಾಗಿ ನುಸುಳಿ ತೋಟದ ಒಳಗೆ ಬಂದು ಹುಡುಕಿತು. ತನ್ನ ಮರಿಯ ಸುಳಿವು ಅಲ್ಲೂ ಸಿಗಲಿಲ್ಲ. ಆದರೆ ಮನೆಯ ಪಕ್ಕದಲ್ಲಿ ಕೊಳಿಗಳು ಅಡಗಿ ಕುಳಿತ್ತಿದ್ದವು.
ಹಸಿದಿದ್ದ ನರಿಗೆ ಕೋಳಿಗಳನ್ನು ಕಂಡು ಆಸೆ ಮೂಡಿತು. ಸುಲಭವಾಗಿ ದೊರಕಿದ ಆಹಾರ ಬಿಡಲು ಅದಕ್ಕೆ ಮನಸ್ಸಾಗಲಿಲ್ಲ. ಮೆಲ್ಲನೆ ಕೋಳಿ ಹಿಡಿಯಲು ತೆವಳಿತು. ಆದರೆ ಅಲ್ಲಿ ಒಡ್ಡಿದ್ದ ಬಲೆಗೆ ತಾನೂ ಸಿಕ್ಕಿಕೊಂಡಿತು.
ನರಿಗೆ ರೈತನ ಜಾಣತನದ ಅರಿವಿಗೆ ಬಂದಿತು. ತನ್ನ ತಪ್ಪಿಗೆ ನರಿ ಸಂಕಟ ಪಡತೊಡಗಿತು. ಅಷ್ಟರಲ್ಲಿ ಅಲ್ಲೇ ಜಿಗಿದಾಡುತ್ತಿದ್ದ ಇಲಿಗಳನ್ನು ಕಂಡಿತು. ನರಿಗೆ ತಕ್ಷಣ ಉಪಾಯವೊಂದು ಹೊಳೆಯಿತು. ಮೆಲ್ಲನೇ ಇಲಿಗಳನ್ನು ಹತ್ತಿರ ಕರೆದು “ನಿಮ್ಮ ಹಲ್ಲುಗಳು ಬಲಹೀನವಾಗಿವೆಯಲ್ಲವೇ?” ಎಂದಿತು. ಇಲಿಗಳು “ಇಲ್ಲ ನರಿಯಣ್ಣಾ, ನಮ್ಮ ಹಲ್ಲುಗಳು ಗಟ್ಟಿಯಾಗಿವೆ?” ಎಂದಿತು. ಅದಕ್ಕೆ ನರಿಯು “ಹಾಗಾದರೆ ಈ ಬಲೆಯನ್ನು ಕತ್ತರಿಸಿ ನೋಡೋಣ” ಎಂದಿತು.
ಇಲಿಗಳು ಕ್ಷಣದಲ್ಲೇ ಆ ಬಲೆಯನ್ನು ಹಲ್ಲುಗಳಿಂದ ಕತ್ತರಿಸಿ ಹಾಕಿದವು. ನರಿ ಬಲೆಯಿಂದ ಹೊರಬಂದಿತು. ಆಗ ನರಿಯು “ಇಲಿಗಳಿರಾ, ನಿಮ್ಮ ಹಲ್ಲುಗಳು ಗಟ್ಟಿಯಾಗಿಯೇ ಇವೆ. ನಾನು ರೈತ ಒಡ್ಡಿದ್ದ ಬಲೆಯಲ್ಲಿ ಸಿಕ್ಕಿಕೊಂಡಿದ್ದೇನು. ನೀವು ನನ್ನನ್ನು ಪಾರು ಮಾಡಿದಿರಿ. ನಿಮಗೆ ಧನ್ಯವಾದಗಳು” ಎಂದು ಹೇಳಿತು.
ಇಲಿಗಳು ನರಿಯ ಜಾಣತನವನ್ನು ಹೊಗಳಿದವು. ಆಗ ನರಿಯು ಇಲಿಗಳನ್ನು ಕುರಿತು “ರೈತನ ಬಲೆಗೆ ಸಿಕ್ಕಿ ಹಾಕಿಕೊಂಡ ನನ್ನ ಕಂದನನ್ನು ಪಾರು ಮಾಡಲೆಂದು ಬಂದೆ. ಆದರೆ ಕೋಳಿಯ ಆಸೆಯಿಂದ ನಾನು ಈ ಬಲೆಗೆ ಸಿಕ್ಕಿಹಾಕಿಕೊಂಡೆ. ನೀವು ನನಗೆ ಉಪಕಾರ ಮಾಡಿದಿರಿ. ಆದರೆ ನನ್ನ ಕಂದ ಮಾತ್ರ ಸಿಗಲಿಲ್ಲ” ಎಂದು ದುಃಖದಿಂದ ಹೇಳಿತು.
ಆಗ ಇಲಿಗಳು ರೈತ ಬಚ್ಚಿಟ್ಟಿದ್ದ ನರಿಯ ಮರಿಯನ್ನು ತಾಯಿ ನರಿಗೆ ತೋರಿಸಿದವು. ತನ್ನ ಮರಿಯನ್ನು ನೋಡಿ ತಾಯಿ ನರಿಗೆ ಆನಂದವಾಯಿತು. ಅವು ಮತ್ತೊಮ್ಮೆ ಇಲಿಗಳಿಗೆ ಧನ್ಯವಾದ ಹೇಳಿದವು. ಸಂತೋಷದಿಂದ ಕಾಡಿನತ್ತ ಓಡಿಹೊದವು.