ಬೆಂಗಳೂರು: ಚನ್ನಪಟ್ಟಣ ಬೈ ಎಲೆಕ್ಷನ್ ಪಾಲಿಟಿಕ್ಸ್ ರಂಗೇರಿದೆ. ಮೈತ್ರಿ ಪಾಳೆಯದಲ್ಲಿ ಟಿಕೆಟ್ ಹಂಚಿಕೆ ಬಿಸಿತುಪ್ಪವಾಗಿದೆ. ಈ ನಡುವೆ ಸೈನಿಕ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಚಿಹ್ನೆ ಬಿಟ್ಟು ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಅವಕಾಶ ಕೊಟ್ಟರೇ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಅವಕಾಶ ಸಿಗಬೇಕಷ್ಟೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಟಿಕೆಟ್ ಮಿಸ್ ಆದರೆ ತಮ್ಮ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ದಾರೆ. ಈ ಮೂಲಕ ಬಂಡಾಯದ ಬಾವುಟ ಹಾರಿಸುವ ಸುಳಿವನ್ನ ಸಹ ನೀಡಿದ್ದಾರೆ.
ನಾನು ಹೆಚ್.ಡಿ ಕುಮಾರಸ್ವಾಮಿ 3 ದಿನಗಳಿಂದ ಚರ್ಚಿಸುತ್ತಿದ್ದೇವೆ. ನಾನು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಿದರೆ ಕಷ್ಟ ಆಗುತ್ತೆ. ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂಬ ಆಸೆ ಇದೆ. ಆದರೆ ಕುಮಾರಸ್ವಾಮಿಗೆ ಮಗನಿಗೆ ಟಿಕೆಟ್ ಕೊಡಬೇಕೆಂಬ ಮನಸ್ಸು ಇದ್ದರೆ ಏನ್ ಮಾಡೋಕೆ ಆಗುತ್ತೆ ಎಂದರು.
ಜನರು ಸಹ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡುವುದು ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು.
ಇದೀಗ ಬಂದ ಮಾಹಿತಿ ಅನ್ವಯ ಬಿಜೆಪಿ ವಿಧಾನಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಇಂದು ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಇಂದು ನಾಲ್ಕು ಗಂಟೆಗೆ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರವನ್ನು ನೀಡಲಿದ್ದಾರೆ.ಅದರೊಂದಿಗೆ ಚನ್ನಪಟ್ಟಣ ಉಪಚುನಾವಣೆ ಅಖಾಡ ಇನ್ನಷ್ಟು ಜೋರಾಗಿದೆ.