ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಯಡಿಯೂರಪ್ಪ ಅವರ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂಬ ಅನುಮಾನವಿದೆ. ಅವರ ಸಾವಿನ ಬಗ್ಗೆಯೂ ತನಿಖೆ ಆಗಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಒತ್ತಾಯಿಸಿದ್ದಾರೆ.
ಮುಡಾ ಕಡತಗಳನ್ನು ಬೈರತಿ ಸುರೇಶ್ ಸುಟ್ಟು ಹಾಕಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಅವರು ಶೋಭಾ ಕರಂದ್ಲಾಜೆ ಅವರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಕೇಂದ್ರ ಸಚಿವರು ಹೇಳಿದಾಕ್ಷಣ ಇಡಿ ಬಂಧಿಸಲು ಸಾಧ್ಯವೇ? ನಾನು ಈ ನೆಲದ ಕಾನೂನಿನ ಬಗ್ಗೆ ಗೌರವ ಉಳ್ಳವನು. ಸಿಬಿಐ, ಇ.ಡಿ, ಪೊಲೀಸ್, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅತ್ಯಂತ ಹೆಚ್ಚು ವಿಶ್ವಾಸವಿದೆ, ಎಂದು ತಿಳಿಸಿದರು.
ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರ ಇದೆ ಎಂದು ನನಗೆ ಅನುಮಾನ ಇದೆ. ರಾಜ್ಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯವರು. ಅವರ ಮಕ್ಕಳು ಕೂಡ ಒಳ್ಳೆಯವರು. ಹಾಗಾದರೆ, ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಅವರ ಸಾವು ಹೇಗಾಯ್ತು. ಆ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾತ್ರ ಇರುವ ಬಗ್ಗೆ ನನಗೆ ಅನುಮಾನ ಇದೆ. ಅವರ ಸಾವಿನ ಬಗ್ಗೆ ತನಿಖೆ ಆಗಬೇಕು.
ಸಚಿವೆ ಶೋಭಾ ಕರಂದ್ಲಾಜೆ ಅವರ ಬಂಧನ ಆಗಬೇಕು. ಕೂಡಲೇ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಮೂಲಕ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಚಿವ ಬೈರತಿ ಸುರೇಶ್ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದ ಮಾತಿಗೆ ವೈಯಕ್ತಿಕವಾಗಿಯೇ ತಿರುಗೇಟು ನೀಡಿದ್ದಾರೆ.
ಬಿ.ವೈ.ವಿಜಯೇಂದ್ರ ಕಿಡಿ
ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಮಿಸ್ಟರ್ ಬೈರತಿ ಸುರೇಶ್ ಅವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವುದು ಗಾದೆ ಮಾತು, ಆದರೆ ನೀವು ಹಾಗೂ ನಿಮ್ಮ ಮುಖ್ಯಮಂತ್ರಿಗಳ ಮೈಯೆಲ್ಲಾ ಭ್ರಷ್ಟತೆಯ ಹುಣ್ಣು ತುಂಬಿಕೊಂಡು ನಾರುತ್ತಿದೆ. ಒಂದರ ಮೇಲೊಂದು ತನಿಖೆಗಳು ನಡೆಯುತ್ತಲೇ ಇವೆ, ಕರ್ನಾಟಕದ ಇತಿಹಾಸದಲ್ಲಿ ಅನೈತಿಕತೆಯನ್ನು ಕತ್ತಿಗೆ ಕಟ್ಟಿಕೊಂಡು ಸರ್ಕಾರ ನಡೆಸುತ್ತಿರುವ ಇತಿಹಾಸ ನಿರ್ಮಿಸಿದ ದಾಖಲೆ ನಿಮಗೆ ಹಾಗೂ ನಿಮ್ಮ ಮುಖ್ಯಮಂತ್ರಿಗೇ ಸಲ್ಲುತ್ತದೆ.
ನೀವು ನಡೆಸಿದ ಕಡು ಭ್ರಷ್ಟ ಹಗರಣಗಳಿಗೆ ಕನಸು ಮನಸ್ಸಿನಲ್ಲೂ ಎಣಿಸದ ರೀತಿಯಲ್ಲಿ ತನಿಖೆಗಳು ನಿಮ್ಮ ಕೊರಳು ಸುತ್ತಿ ಕೊಳ್ಳುತ್ತಿವೆ ಇದರಿಂದ ತೀವ್ರ ಹತಾಶಗೊಂಡಿರುವ ನೀವು ನಮ್ಮ ತಾಯಿಯವರ ಆಕಸ್ಮಿಕ ಸಾವಿನ ವಿಚಾರಗಳನ್ನು ಮುಂದೆ ತಂದು ಮಾತನಾಡುತ್ತಿರುವುದು ನಿಮ್ಮ ಅಸಭ್ಯ ಹಾಗೂ ಸಂಸ್ಕೃತಿ ಹೀನ ನಡವಳಿಕೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಸಚಿವ ಬೈರತಿ ಸುರೇಶ್ ವಿರುದ್ಧ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಮಾಡಿರುವ ಆರೋಪಗಳಿಗೆ ಉತ್ತರಿಸಲಾಗದ ನೀವು ಹೇಡಿಯಂತೆ ಕಪೋಲ ಕಲ್ಪಿತ ಆರೋಪಗಳನ್ನು ಮಾಡಿ ವಿಷಯಾಂತರ ಮಾಡಲು ಹೊರಟಿರುವ ನಿಮ್ಮ ನಡೆ “ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಗುಣವ ಬಿಡು ನಾಲಿಗೆ” ಎಂಬ ದಾಸರ ಪದವನ್ನು ನಿಮಗೆ ನೆನಪಿಸಿ ಹೇಳಬೇಕಾಗಿದೆ. ಮಾಡಿದ್ದುಣ್ಣೋ ಮಹರಾಯ ಎಂಬ ಮಾತಿನಂತೆ ಅತೀ ಶೀಘ್ರದಲ್ಲೇ ನಿಮ್ಮ ಹಾದಿ ಕೃಷ್ಣನ ಜನ್ಮಸ್ಥಾನದತ್ತ ಸಾಗಲಿದೆ ಎಂದು ಹೇಳಿದರು.