ನಮಗೆ ನಿದ್ರೆ ಕಾರಣ ಎಡೆನೋಸಿಸ್. ಇದು ಹೆಚ್ಚಾದಷ್ಟು ನಿದ್ರೆ ಹೆಚ್ಚು, ಕಡಿಮೆ ಆದಷ್ಟು ನಿದ್ರೆ ಇಳಿಯುತ್ತದೆ. ರಾತ್ರಿ ಹೊತ್ತು ಇದು ದೇಹದಲ್ಲಿ ತುಂಬಿ ತುಳಕುವುದರಿಂದ ರಾತ್ರಿ ಹತ್ತಾದರೆ ನಿದ್ರೆ ಓಡಿ ಬರುತ್ತದೆ.
ಆರೋಗ್ಯವಂತ ದೇಹಕ್ಕೆ ದಿನವಿಡೀ ಚಟುವಟಿಕೆ ಹೇಗೆ ಮುಖ್ಯವೋ ಹಾಗೆಯೇ ನೆಮ್ಮದಿಯ ನಿದ್ರೆಯೂ ಮುಖ್ಯ. ಆಹಾರ, ಉಸಿರಾಟದಂತೇ ನಿದ್ರೆ ಕೂಡ ನಮ್ಮ ದಿನನಿತ್ಯದ ಜರೂರತ್ತು. ಪರಿಣಿತರ ಪ್ರಕಾರ ಆರರಿಂದ ಹನ್ನೆರಡು ವರ್ಷಪ್ರಾಯದವರಿಗೆ ಕನಿಷ್ಠ ಒಂಭತ್ತು ಹಾಗೂ ಹದಿಮೂರರಿಂದ ಹದಿನೆಂಟು ವಯಸ್ಸಿನವರಿಗೆ ಎಂಟು ಘಂಟೆ ಪ್ರತಿನಿತ್ಯ ನಿದ್ದೆ ಬೇಕು.
ನಿದ್ರೆಗೆ ಕಾರಣಗಳು
ನಿದ್ರೆ ಬರಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ನಮ್ಮ ಮೆದುಳಿನಲ್ಲಿ ಎಡೆನೋಸಿನ್ ಎಂಬ ಸಂಯುಕ್ತ ವಸ್ತುವಿದೆ. ಇದೇ ನಿದ್ರೆ ನಿಯಂತ್ರಕ.
ದಿನದಲ್ಲಿ ಪ್ರತಿಘಂಟೆಯೂ ಅದರ ಪ್ರಮಾಣ ಹೆಚ್ಚುತ್ತಾ ಹೋಗಿ ರಾತ್ರಿಯ ವೇಳೆ ಗರಿಷ್ಠ ಮಟ್ಟ ತಲುಪುತ್ತದೆ. ಆಗ ನಿದ್ರೆ ಬರುತ್ತದೆ. ನಿದ್ದೆ ಸಮಯದಲ್ಲಿ ನಮ್ಮ ದೇಹವು ಈ ಎಡೆನೋಸಿನ್‌ಅನ್ನು ಕರಗಿಸುವುದರಿಂದ ಹಗಲಾಗುವಷ್ಟರಲ್ಲಿ ಅದು ಕನಿಷ್ಠ ಮಟ್ಟಕ್ಕೆ ತಲುಪಿ, ಮುಂಜಾಗೆ ನಾವು ಎಚ್ಚರಗೊಂಡು ಹೊಸದಿನಕ್ಕೆ ಅಣಿಯಾಗುತ್ತೇವೆ.
ಎರಡನೇಯದಾಗಿ ನಮ್ಮ ದೇಹದೊಳಗಿರುವ ಜೈವಿಕ ಗಡಿಯಾರ ಹಲವು ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದೆ.
ನಮ್ಮ ಕಣ್ಣುಗಳು ನೋಡುವ ಬೆಳಕಿನ ಪ್ರಮಾಣದ ಆಧಾರದ ಮೇಲೆ ಸಮಯವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಮೆದುಳಿನ ಆಜ್ಞೆಯಂತೆ ಹಾರ್ಮೋನುಗಳನ್ನು ಸ್ರವಿಸುವ ವ್ಯವಸ್ಥೆ ದೇಹದಲ್ಲಿ ನಡೆಯುತ್ತಿರುತ್ತದೆ.
ಅಂತೆಯೇ, ರಾತ್ರಿಯ ವೇಳೆ ಅಂದರೆ ಕಡಿಮೆ ಬೆಳಕಿನಲ್ಲಿ ದೇಹವು ಮೆಲಾಟೊನಿನ್ ಎಂಬ ಹಾರ್ಮೋನನ್ನು ಸ್ರವಿಸುತ್ತದೆ. ಇದೇ ನಿಮ್ಮನ್ನು ತೂಕಡಿಸುವಂತೆ ಮಾಡಿ ನಿದ್ರೆಗೆ ಅಣಿಗೊಳಿಸುವುದು.
ವಿವಿಧ ಹಂತಗಳು
ನೀವು ಕಂಡ ಕನಸುಗಳು ಮಾರನೇಯ ದಿನ ನೆನಪಾಗುವುದೇ ಇಲ್ಲ. ಏಕೆ ಹೀಗೆ? ಈ ಬಗ್ಗೆ ನೀವೆಂದಾದರು ಯೋಚಿಸಿದ್ದೀರ? ನಮ್ಮ ನಿದ್ರೆಯನ್ನು ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು.
ಮೊದಲಘಟ್ಟದಲ್ಲಿ ಪ್ರಜ್ಞಾವಸ್ಥೆಯಿಂದ ನಿಧಾನವಾಗಿ ನಿದ್ರಾವಸ್ಥೆಗೆ ಜಾರುತ್ತದೆ.
ಎರಡನೆಯ ಘಟ್ಟ ಲಘುನಿದ್ರಾವಸ್ಥೆ. ಈ ಘಟ್ಟದಲ್ಲಿರುವವರನ್ನು ಎಚ್ಚರಗೊಳಿಸುವುದು ಸುಲಭ.
ಮೂರನೆಯದು ದೀರ್ಘನಿದ್ರಾವಸ್ಥೆ – ಈ ಘಟ್ಟ ಅತ್ಯಂತ ಉಪಯುಕ್ತವಾಗಿದ್ದು ದೇಹಕ್ಕೆ ಅತ್ಯಗತ್ಯ ವಿಶ್ರಾಂತಿಯನ್ನು ನೀಡುತ್ತದೆ.
ಈ ಮೂರರಿಂದ ಭಿನ್ನವಾಗಿರುವ ನಾಲ್ಕನೆಯ ಘಟ್ಟದಲ್ಲಿ ದೇಹವು ನಿದ್ರಾವಸ್ಥೆಯಲ್ಲಿದ್ದರೂ ಮುಚ್ಚಿದ ಕಣ್ಣುಗುಡ್ಡೆಗಳು ಅತ್ತಿಂದಿತ್ತ ಓಡಾಡುತ್ತಿರುತ್ತವೆ. ಈ ಘಟ್ಟದಲ್ಲೇ ನಾವು ಕನಸು ಕಾಣುವುದು. ಕನಸುಗಳು ನಮ್ಮ ಮೆದುಳಿನ ಮೇಲೆ ಒತ್ತಡ ಕಡಿಮೆ ಮಾಡುವುದಕ್ಕೆ ದೇಹವು ಕಂಡುಕೊಂಡ ನೈಸರ್ಗಿಕ ಉಪಾಯ.
ಜಾಗ ಬದಲಿಸಿದರೆ ನಿದ್ರೆ ಬರದು
ಹೊಸ ಜಾಗದಲ್ಲಿ ಮಲಗಿದಾಗ ನಿದ್ರೆ ಬಾರದಿರುವುದು ಒಂದು ಸಾಮಾನ್ಯ ಅನುಭವ. ನಮ್ಮ ಸುಪ್ತ ಮನಸ್ಸೇ ಇದಕ್ಕೆಲ್ಲ ಕಾರಣ. ನಾವು ಜಾಗ ಬದಲಿಸಿದಾಗ ಹೊಸ ಜಾಗದಲ್ಲಿ ತೊಂದರೆ ಉಂಟಾಗಬಹುದೆಂದು ಊಹಿಸುವುದರಿಂದ, ನಮ್ಮ ಮೆದುಳು ಅದಕ್ಕೆ ಸಜ್ಜಾಗಿ ರಾತ್ರಿ ಅರ್ಧ ಎಚ್ಚರದಿಂದಿರುತ್ತದೆ.
ಕೃಪೆ: ಸುನೀಲ್ ಬಾರ್ಕೂರ್ (ಸಾಮಾಜಿಕ ಜಾಲತಾಣ)