ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ಕಿಚ್ಚ ಸುದೀಪ್ ಅವರ ತಾಯಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಂಗಳೂರಿನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅನೇಕ ಗಣ್ಯರು ಅಂತಿಮ ನಮನ ಸಲ್ಲಿಸಿದರು. ತಾಯಿ ಅಗಲಿಕೆ ನಟ ಸುದೀಪ್ ಹಾಗೂ ಅವರ ಇಡೀ ಕುಟುಂಬ ದುಃಖದ ಮಡುವಿನಲ್ಲಿದೆ.
ಇಂದು ಸಂಜೆ ಸರೋಜಮ್ಮನವರ ಅಂತ್ಯಕ್ರಿಯೆ ಶಾಸ್ತ್ರೋಕ್ತವಾಗಿ ನೆರೆವೇರಿದೆ.
ಸರೋಜಮ್ಮ ಅವರ ಅಗಲಿಕೆ ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಂತೆಯೇ ತೆಲುಗಿನ ಪವರ್ ಸ್ಟಾರ್, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಕೂಡ ಕನ್ನಡದಲ್ಲೇ ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಕನ್ನಡದಲ್ಲೇ ಪತ್ರ ಪ್ರಕಟಿಸಿರುವ ಪವನ್ ಕಲ್ಯಾಣ್, ಶ್ರೀ ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು. ಖ್ಯಾತ ನಟ ಶ್ರೀ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ದುಃಖವಾಗಿದೆ.
ಶ್ರೀಮತಿ ಸರೋಜಾ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ನಟ ಸುದೀಪ್ ತಾಯಿಯ ನಷ್ಟದಿಂದ ಬೇಗ ಚೇತರಿಸಿಕೊಳ್ಳಲಿ. ಸುದೀಪ್ ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು ಎಂದು ಪತ್ರದ ಮುಖೇನ ತಿಳಿಸಿದ್ದಾರೆ.